ಮುಂಬೈ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಭಾರೀ ಮಳೆಯಿಂದ ವಾಣಿಜ್ಯ ನಗರಿ ಮುಂಬೈ ತತ್ತರಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು, ಅಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದು, ಶಾಲಾ-ಕಾಲೇಜುಗಳಿಗೆ ತಾತ್ಕಾಲಿಕ ರಜೆ ಘೋಷಿಸಿದ್ದಾರೆ.
ಮಳೆ ಅನಿರೀಕ್ಷಿತ ರೀತಿಯಲ್ಲಿ ಸುರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಕೆರೆಗಳಂತಾಗಿವೆ. ವಾಹನ ಸಂಚಾರವು ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು, ಜನರು ದಿಕ್ಕೆಟ್ಟಿದ್ದಾರೆ.
ಮಳೆ ನೀರು ವಿದ್ಯುತ್ ಕಂಬಕ್ಕೆ ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿ ವೃದ್ದೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಭಾರೀ ಮಳೆಯ ಪರಿಣಾಮವಾಗಿ ಕೆಲವೇ ಗಂಟೆಗಳಲ್ಲಿ ಕೆಲ ಪ್ರದೇಶಗಳಲ್ಲಿ ದಾಖಲೆ ಮಟ್ಟದ 300 ಮಿ.ಮೀ. ಮಳೆಯಾಗಿದೆ. ಇದರಿಂದ ಪ್ರಮುಖ ರಸ್ತೆಗಳು ನೀರಿನಿಂದ ಮುಚ್ಚಿಹೋಗಿದ್ದು, ಜನರು ಪರದಾಡುತ್ತಿದ್ದಾರೆ.
ಈ ಪರಿಸ್ಥಿತಿಯಿಂದಾಗಿ ಸುಮಾರು 50 ವಿಮಾನ ಸಂಚಾರಗಳನ್ನು ರದ್ದುಗೊಳಿಸಲಾಗಿದೆ. ಮೆಟ್ರೋ ಸೇರಿದಂತೆ ಹಲವಾರು ರೈಲು ಸಂಚಾರಗಳಿಗೂ ತಡೆಂಟಿದೆ. ದೂರದ ರೈಲು ಮಾರ್ಗಗಳನ್ನು ಬದಲಾಯಿಸಲಾಗಿದ್ದು, 42 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮುಂಬೈಗೆ ಬರಲಿರುವ 6 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.
ಹವಾಮಾನ ಇಲಾಖೆ ಮಂಗಳವಾರವೂ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದು, ಜನರಿಗೆ ಎಚ್ಚರಿಕೆಯಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ದುಸ್ಥಿತಿಯಲ್ಲಿ, ಮುಂಬೈನ ಜನರು ಸಂಕಷ್ಟವನ್ನು ಎದುರಿಸುತ್ತಿದ್ದು, ತುರ್ತು ಸೇವೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹರಸಾಹಸ ಪಡುತ್ತಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


