ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಭಾರೀ ಬೇಡಿಕೆ ಇದೆ. ಮಂಡ್ಯ ಸಂಸದ ಮತ್ತು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಈ ಮಾದರಿ ರೈಲಿಗಾಗಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರವನ್ನು ಬರೆದಿದ್ದಾರೆ.
ಕರ್ನಾಟಕದಲ್ಲಿ ಹಲವು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ. ಎಚ್.ಡಿ.ಕುಮಾರಸ್ವಾಮಿ ಯಾವ ಮಾರ್ಗದ ರೈಲಿಗಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಪತ್ರದಲ್ಲಿದೆ.
ಕುಮಾರಸ್ವಾಮಿ ಪತ್ರದ ವಿವರ: ಸಚಿವ ಅಶ್ವಿನಿ ವೈಷ್ಣವ್‌ಗೆ ಬರೆದಿರುವ ಪತ್ರದಲ್ಲಿ ಕುಮಾರಸ್ವಾಮಿ ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಬಹಳ ದಿನಗಳಿಂದ ಬೆಂಗಳೂರು ನಗರ ಮತ್ತು ಕರಾವಳಿ ಕರ್ನಾಟಕವನ್ನು ಸಂಪರ್ಕಿಸಲು ಹೈ-ಸ್ಪೀಡ್ ರೈಲು ಸೇವೆ ಬೇಕು ಎಂಬ ಬೇಡಿಕೆ ಇದೆ.
ಕರ್ನಾಟಕ ಮತ್ತು ಗೋವಾ ರಾಜ್ಯದ ಕರಾವಳಿ ತೀರವನ್ನು ಬೆಂಗಳೂರು ನಗರದಿಂದ ಸಂಪರ್ಕಿಸಬೇಕಿದೆ. ಘಾಟ್ ಮಾರ್ಗದಲ್ಲಿ ರೈಲು ಮಾರ್ಗದ ವಿದ್ಯುದೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈಗ ಈ ಮಾರ್ಗ ವಂದೇ ಭಾರತ್ ರೈಲು ಸೇವೆ ಪ್ರಾರಂಭಿಸಲು ಸಿದ್ಧವಾಗಿದೆ.
ಈ ಹಿನ್ನಲೆಯಲ್ಲಿ ನಾನು ಬೆಂಗಳೂರು-ಮಡಗಾಂವ್ (ಗೋವಾ) ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆಯನ್ನು ಪ್ರಾರಂಭಿಸಬೇಕು ಎಂದು ಪ್ರಸ್ತಾವನೆ ಮಾಡುತ್ತಿದ್ದೇನೆ. ಈ ರೈಲು ಹಾಸನ, ಮಂಗಳೂರು ಜಂಕ್ಷನ್, ಉಡುಪಿ ಮತ್ತು ಕಾರವಾರ ಮಾರ್ಗದಲ್ಲಿ ಸಂಚಾರ ನಡೆಸಬೇಕು.
ಈ ಮಾರ್ಗದಲ್ಲಿ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಸಂಚಾರವನ್ನು ನಡೆಸುತ್ತಾರೆ. ಇವರಲ್ಲಿ ಭಕ್ತಾದಿಗಳು, ಪ್ರವಾಸಿಗರು, ಶಿಕ್ಷಣಕ್ಕಾಗಿ ಸಂಚಾರ ನಡೆಸುವವರು, ಉದ್ಯಮಿಗಳು ಸೇರಿದ್ದಾರೆ. ಈ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಅಗತ್ಯವಿದೆ.
ಈ ರೈಲು ದೇಶದ ಐಟಿ ರಾಜಧಾನಿ ಬೆಂಗಳೂರು ನಗರವನ್ನು ಬಂದರು, ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕ ಮತ್ತು ಗೋವಾವನ್ನು ಸಂಪರ್ಕಿಸುತ್ತದೆ. ಈ ಕುರಿತು ಕಾರ್ಯ ಸಾಧ್ಯತಾ ವರದಿಯನ್ನು ನೈಋತ್ಯ ರೈಲ್ವೆ ಅಧಿಕಾರಿಗಳಿಂದ ತರಿಸಿಕೊಂಡು ವಂದೇ ಭಾರತ್ ರೈಲು ಓಡಿಸುವ ಪ್ರಸ್ತಾವನೆ ಕುರಿತು ಗಮನಹರಿಸಬೇಕು ಎಂದು ಪತ್ರದಲ್ಲಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ವಂದೇ ಭಾರತ್ ರೈಲು ಸೇವೆ ಆರಂಭದಿಂದ ಈ ಪ್ರದೇಶಗಳ ಅಭಿವೃದ್ಧಿಗೆ ಸಹಾಯಕವಾಗಲಿದೆ. ಆರ್ಥಿಕ ಮತ್ತು ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಇನ್ನಷ್ಟು ಜನರು ಶೀಘ್ರವಾಗಿ ಸಂಚಾರ ನಡೆಸಲು ರೈಲು ನೆರವಾಗಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆರ್ಥಿಕತೆ, ಪ್ರವಾಸೋದ್ಯಮ, ಉದ್ಯಮದ ಅಭಿವೃದ್ಧಿಗೆ ಅಂತರರಾಜ್ಯ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಅಗತ್ಯವಿದೆ. ರೈಲು ಸೇವೆಯನ್ನು ಆಧುನೀಕರಣಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳು ಸ್ವಾಗತಾರ್ಹವಾಗಿವೆ. ಈ ಮಾದರಿ ರೈಲು ಪರಿಚಯಿಸುವ ಕುರಿತು ಗಮನಹರಿಸಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.
ಬೆಂಗಳೂರು-ಮಡಗಾಂವ್ (ಗೋವಾ) ನಡುವೆ ವಂದೇ ಭಾರತ್ ರೈಲು ಆರಂಭಿಸುವ ಕುರಿತು ಆಡಳಿತಾತ್ಮಕ ಅಂಶಗಳನ್ನು ಗಮನಿಸಿ, ಶೀಘ್ರವೇ ತೀರ್ಮಾನ ಕೈಗೊಳ್ಳುತ್ತೀರಿ ಎಂಬ ಭರವಸೆ ಹೊಂದಿದ್ದೇನೆ ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.
ಮಂಗಳೂರು-ಮಡಗಾಂವ್ ವಯಾ ಉಡುಪಿ, ಕಾರವಾರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಇದೆ. ಆದರೆ ಈ ರೈಲನ್ನು ಕೇರಳ ತನಕ ವಿಸ್ತರಣೆ ಮಾಡಬೇಕು ಎಂದು ಕೇರಳ ಬಿಜೆಪಿ ಘಟಕ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಪರ್ಕವಿಲ್ಲ. ಸಕಲೇಶಪುರ-ಸುಬ್ರಮಣ್ಯ ರೋಡ್ ನಡುವಿನ ವಿದ್ಯುದೀಕರಣ ಕಾಮಗಾರಿ ಕಾರಣ ವಂದೇ ಭಾರತ್ ರೈಲು ಸೇವೆ ಪ್ರಾರಂಭಿಸಿರಲಿಲ್ಲ. ಆದರೆ ಈಗ ಕಾಮಗಾರಿ ಪೂರ್ಣಗೊಂಡಿದ್ದು, ವಂದೇ ಭಾರತ್ ರೈಲು ಓಡಿಸಬೇಕು ಎಂಬುದು ಬೇಡಿಕೆಯಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


