ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಚಪ್ಪಲಿ ಎಸೆತ ಮತ್ತು ವೈಯಕ್ತಿಕ ನಿಂದನೆಗಳನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಚಿವ ಮಧು ಬಂಗಾರಪ್ಪ, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಮಗ್ರ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ವಿವರವಾಗಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿಯ ಸ್ವಾತಂತ್ರ್ಯವಿದೆ. ಆದರೆ, ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಚಪ್ಪಲಿ ಎಸೆತ, ತಾಯಿ ಮತ್ತು ಕುಟುಂಬದವರ ಬಗ್ಗೆ ಹೀಯಾಳಿಸುವುದು ಸರಿಯಲ್ಲ. ಇಂತಹ ಕೃತ್ಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಪ್ರದೀಪ್ ಈಶ್ವರ್ ಅವರನ್ನು ‘ಒಬಿಸಿ ಹುಡುಗ’ ಎಂದು ಹೀಯಾಳಿಸಿರುವುದು ಖಂಡನೀಯ. ಜಾತಿಯ ಆಧಾರದಲ್ಲಿ ನಿಂದಿಸುವುದು ಸಂವಿಧಾನ ವಿರೋಧಿ. ಪ್ರದೀಪ್ ಅವರು ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ, ಆದರೆ ಜಾತಿ ನಿಂದನೆ ಮಾಡುವುದು ಸರಿಯಲ್ಲ.
ಬಿಜೆಪಿ ನಾಯಕರು ಈಗ ಓಬಿಸಿ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ದಶಕಗಳ ಹಿಂದೆ ದೇವೇಗೌಡರು ಪ್ರಧಾನಿ ವಿರುದ್ಧ ಮಾತನಾಡಿದ್ದನ್ನು ಮರೆತರಾ? ವ್ಯಕ್ತಿಗತ ನಿಂದನೆ ಮಾಡುವುದು ಬಿಜೆಪಿಯವರ ಸಂಸ್ಕೃತಿಯೇ ಎಂದು ಪ್ರಶ್ನಿಸಿದರು.
ರಾಜಕೀಯ ಭಿನ್ನಾಭಿಪ್ರಾಯಗಳಿರಲಿ, ಆದರೆ ಸರ್ಕಾರಿ ಕೆಲಸಗಳಿಗೆ ಅಡ್ಡಿಪಡಿಸುವುದು ಮತ್ತು ಮದ್ಯಪಾನ ಮಾಡಿ ಕೆಟ್ಟ ಭಾಷೆ ಬಳಸಿ ಮಾತನಾಡುವುದು ನಾಡನ್ನು ಆಳಿದವರಿಗೆ ಶೋಭೆ ತರುವುದಿಲ್ಲ ಎಂದು ಮಧು ಬಂಗಾರಪ್ಪ ಅವರು ವಿರೋಧ ಪಕ್ಷದ ನಾಯಕರಿಗೆ ಚಾಟಿ ಬೀಸಿದರು.
ಇಂತಹ ಘಟನೆಗಳ ತನಿಖೆಗೆ ವಿಶೇಷ ಸಮಿತಿ ರಚಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದೇನೆ. ಸಿಎಂ ಈಗಾಗಲೇ ಎಲ್ಲರ ಮೇಲೆ ಕೇಸ್ ದಾಖಲಿಸಲು ಸೂಚಿಸಿದ್ದಾರೆ.
ಗೃಹಜ್ಯೋತಿ ಯೋಜನೆ ದುರುಪಯೋಗ ತಡೆಯಲು ಮತ್ತು ತೆರಿಗೆದಾರರ ಹಣ ಸದ್ಬಳಕೆಯಾಗಲು ‘ಕ್ಲೀನ್ ಅಪ್’ ಅಗತ್ಯವಿದೆ. ಬೇರೆ ರಾಜ್ಯಗಳಲ್ಲಿ ಮತದಾರರಾಗಿರುವವರು ಕರ್ನಾಟಕದಲ್ಲಿ ಯೋಜನೆ ಪಡೆಯುವುದು ಸರಿಯಲ್ಲ. ಇದು ಬಿಜೆಪಿ ಹುನ್ನಾರವಲ್ಲ, ಯೋಜನೆಯ ಪಾರದರ್ಶಕತೆಗಾಗಿ ಮಾಡುತ್ತಿರುವ ಕೆಲಸ.
ಸಚಿವ ಸಂಪುಟ ವಿಸ್ತರಣೆ ವಿಷಯವು ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಅವರ ನಿರ್ಧಾರಕ್ಕೆ ಬಿಟ್ಟಿದ್ದು. ಆದಷ್ಟು ಬೇಗ ಸಂಪುಟ ಸಭೆ ನಡೆದರೆ ಆಡಳಿತಾತ್ಮಕವಾಗಿ ಅನುಕೂಲವಾಗುತ್ತದೆ ಎಂದರು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


