ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಸಮೀಪ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ ಟೊಯೋಟಾ ಫಾರ್ಚೂನರ್ ಕಾರೊಂದನ್ನು ಸಂಚಾರ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕಾರಿಗೆ ಎರಡು ನಂಬರ್ ಪ್ಲೇಟ್‌ಗಳನ್ನು ಅಳವಡಿಸಿರುವುದು ಬಯಲಾಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸೆಪ್ಟೆಂಬರ್ 7ರಂದು ಡಿಸಿಎಂ ನಿವಾಸದ ಬಳಿ ಬಿಳಿ ಬಣ್ಣದ ಫಾರ್ಚೂನರ್ ಕಾರು ದೀರ್ಘಕಾಲದವರೆಗೆ ನಿಂತಿತ್ತು. ಸಂಚಾರಿ ಪೊಲೀಸರು ಅದನ್ನು ಗಮನಿಸಿ, ಅದರ ಚಾಲಕನನ್ನು ಹುಡುಕಿದರೂ ಯಾರೂ ಇರಲಿಲ್ಲ. ಕಾರನ್ನು ಟೋಯಿಂಗ್ ಮಾಡುವ ಸಂದರ್ಭದಲ್ಲಿ, ಅದರ ಮುಂಭಾಗದಲ್ಲಿ KA 51 MW 6814 ಎಂಬ ನಕಲಿ ನಂಬರ್ ಪ್ಲೇಟ್ ಅಂಟಿಸಿರುವುದು ಕಂಡುಬಂದಿತು.
ಈ ನಂಬರ್ ಪ್ಲೇಟ್‌ನ ಮಾಲೀಕ ದೀಪಕ್‌ಗೆ ಕರೆ ಮಾಡಿದಾಗ, ಅವರ ಕಾರು ಮನೆಯಲ್ಲೇ ಇದೆ ಎಂದು ತಿಳಿಸಿದ್ದು ಪೊಲೀಸರಿಗೆ ಗೊಂದಲ ಮೂಡಿಸಿತು.ಪೊಲೀಸರು ಕಾರಿನ ಹಿಂಭಾಗವನ್ನು ಪರಿಶೀಲಿಸಿದಾಗ, ನಕಲಿ ನಂಬರ್ ಪ್ಲೇಟ್‌ನ ಕೆಳಗೆ KA 42 P 6606 ಎಂಬ ಅಸಲಿ ನಂಬರ್ ಪ್ಲೇಟ್ ಇರುವುದು ಪತ್ತೆಯಾಯಿತು.
ಕಾರಿನ ಮೂಲ ನಂಬರ್ ಪ್ಲೇಟ್ ರಾಮನಗರದ ಆರ್‌ಟಿಒ(RTO) ಕಚೇರಿಯಲ್ಲಿ ಮಂಜುನಾಥ್ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿದೆ.ಎಂಎನ್‌ಐ ಕಟ್ಟದಿರುವ ಕಾರಣ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕಳ್ಳಾಟ ನಡೆಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಿ ನೋಟಿಸ್ ಜಾರಿ ಮಾಡಿದ್ದಾರೆ.ಕಾರನ್ನು ಜಪ್ತಿ ಮಾಡಿ ಐದು ದಿನಗಳು ಕಳೆದರೂ ಮಾಲೀಕ ಮಂಜುನಾಥ್ ಇದುವರೆಗೂ ಕಾರನ್ನು ಬಿಡಿಸಿಕೊಳ್ಳಲು ಬಂದಿಲ್ಲ. ಒಂದೇ ಕಾರಿಗೆ ಎರಡು ನಂಬರ್ ಪ್ಲೇಟ್‌ಗಳನ್ನು ಬಳಸಿದ್ದರ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


