ಬೆಂಗಳೂರು ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಅನ್ನು ಬಿಎಂಆರ್‌ಸಿಎಲ್ ನಿರ್ಮಾಣ ಮಾಡಿದೆ. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಬರುವ ಈ ಫ್ಲೈ ಓವರ್ ಸಿಲ್ಕ್ ಬೋರ್ಡ್–ರಾಗಿಗುಡ್ಡ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಸುಮಾರು 5.12 ಕಿ.ಮೀ. ಉದ್ದದ ಫ್ಲೈ ಓವರ್ ಒಂದು ಕಡೆ ಮಾತ್ರ ವಾಹನ ಸಂಚಾರ ನಡೆಸುತ್ತಿವೆ.
ಈಗ ಬಿಎಂಆರ್‌ಸಿಎಲ್ ನಗರದ ಜನರಿಗೆ ಖುಷಿಯ ಸುದ್ದಿಯೊಂದನ್ನು ನೀಡಿದೆ. ಡಬಲ್ ಡೆಕ್ಕಲ್ ಫ್ಲೈ ಓವರ್‌ನ ಇನ್ನೊಂದು ಬದಿಯಲ್ಲಿಯೂ ವಾಹನ ಸಂಚಾರ ಆರಂಭವಾಗುವ ದಿನಗಳು ಹತ್ತಿರವಾಗುತ್ತಿದ್ದು, ಅಪ್‌ಡೇಟ್ ಸಿಕ್ಕಿದೆ.
ಡಿಸೆಂಬರ್ ಅಂತ್ಯ ಅಥವ ಜನವರಿ ಮೊದಲ ವಾರದಲ್ಲಿ ಡಬಲ್ ಡೆಕ್ಕರ್‌ನ ಮತ್ತೊಂದು ಬದಿಯಲ್ಲಿಯೂ ವಾಹನಗಳ ಸಂಚಾರ ಆರಂಭವಾಗಲಿದೆ. ಸದ್ಯ ರಾಗಿಗುಡ್ಡ-ಸಿಲ್ಕ್ ಬೋರ್ಡ್ ನಡುವೆ ಮಾತ್ರ ವಾಹನ ಸಂಚಾರ ನಡೆಸುತ್ತಿದೆ. ಈಗ ಸಿಲ್ಕ್‌ಬೋರ್ಡ್-ರಾಗಿಗುಡ್ಡ ನಡುವೆ ಸಂಚಾರ ಆರಂಭವಾಗಲಿದೆ.
ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಹೆಚ್‌ಎಸ್ಆರ್ ಲೇಔಟ್, ಬಿಟಿಎಂ ಲೇಔಟ್ ಸಂಪರ್ಕಿಸಲು ಡಬಲ್ ಡೆಕ್ಕರ್ ಫ್ಲೈ ಓವರ್‌ಗೆ ಸ್ಟೀಲ್ ಗ್ರಿಡ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಆರಂಭಿಸಿದ್ದು, ಈ ಕಾಮಗಾರಿ ಪೂರ್ಣವಾದರೆ ಸಂಪೂರ್ಣ ಡಬಲ್ ಡೆಕ್ಕರ್ ಫ್ಲೈ ಓವರ್ ಸಂಚಾರಕ್ಕೆ ಮುಕ್ತವಾಗುತ್ತದೆ.
ಸುಮಾರು 449 ಕೋಟಿ ರೂ. ವೆಚ್ಚದಲ್ಲಿ ಬಿಎಂಆರ್‌ಸಿಎಲ್ 5.12 ಡಬಲ್ ಡೆಕ್ಕರ್ ಫ್ಲೈ ಓವರ್ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಕೈಗೊಂಡಿತ್ತು. 2024ರ ಜುಲೈನಲ್ಲಿ ರಾಗಿಗುಡ್ಡ-ಸಿಲ್ಕ್‌ಬೋರ್ಡ್ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.
ಈಗ ಬಿಎಂಆರ್‌ಸಿಎಲ್ ಕೈಗೊಂಡಿರುವ ಡೌನ್ ರ‍್ಯಾಂಪ್ ಕಾಮಗಾರಿಯಿಂದ ಫ್ಲೈ ಓವರ್‌ನಿಂದ ಹೆಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್ ಮತ್ತು ರಾಗಿಗುಡ್ಡಕ್ಕೆ ಸಂಪರ್ಕ ಸಾಧ್ಯವಾಗಲಿದೆ. ಈ ಮಾರ್ಗ ಸಂಚಾರಕ್ಕೆ ಮುಕ್ತವಾದರೆ ಸಂಚಾರ ದಟ್ಟಣೆಯ ಸಮಸ್ಯೆ ಸಹ ಪರಿಹಾರವಾಗುತ್ತದೆ.
5.5 ಕಿ.ಮೀ. ಉದ್ದದ್ದ ಫ್ಲೈ ಓವರ್‌ನ ಮತ್ತೊಂದು ಭಾಗ ಸಂಚಾರಕ್ಕೆ ಮುಕ್ತವಾದರೆ ಎಲೆಕ್ಟ್ರಾನಿಕ್ ಸಿಟಿ, ಹೆಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್, ರಾಗಿಗುಡ್ಡ ಕಡೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.
ಸೆಪ್ಟೆಂಬರ್‌ನಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿತ್ತು. ಆದರೆ ಈ ರಸ್ತೆಯಲ್ಲಿರುವ ಸಂಚಾರ ದಟ್ಟಣೆಯ ಕಾರಣ ಕಾಮಗಾರಿ ವಿಳಂಬವಾಗಿದೆ. ಕೆಲವು ಗಂಟೆಗಳ ಕಾಲ ಮಾತ್ರ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಿದೆ. ಆದ್ದರಿಂದ ಗಡುವು ಮೀರಿ ಹೋಗಿದೆ.
ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಸಂಪರ್ಕಿಸುವ ಗ್ರಿಡ್‌ನ ವಿನ್ಯಾಸವನ್ನು ಇಂಜಿನಿಯರ್‌ಗಳು ಬದಲಿಸಿದ್ದಾರೆ. ಇಲ್ಲಿ ಸ್ಟಿಲ್ ಗ್ರಿಡ್ ನಿರ್ಮಾಣ ಮಾಡುವ ಕುರಿತು ವಿನ್ಯಾಸ ಬದಲಾಯಿಸಿದ ಕಾರಣ ಕಾಮಗಾರಿ ಇನ್ನಷ್ಟು ತಡವಾಗಿದೆ. ಆದರೆ ಈ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಫ್ಲೈ ಓವರ್ ಮುಕ್ತವಾದ ಬಳಿಕ ಬೆಂಗಳೂರು ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸಿಲ್ಕ್ ಬೋರ್ಡ್ ಸಿಗ್ನಲ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಮೇಲೆ ಮೆಟ್ರೋ, ಕೆಳಗೆ ವಾಹನ ಸಂಚಾರ ನಡೆಸುವ ಡಬಲ್ ಡೆಕ್ಕರ್ ಫ್ಲೈ ಓವರ್ ನಗರದ ಪ್ರಮುಖ ಪ್ರದೇಶದ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಬೊಮ್ಮನಹಳ್ಳಿ, ಮಡಿವಾಳ, ಹೆಚ್‌ಎಸ್‌ಆರ್ ಲೇಔಟ್ ವಾಹನಗಳ ಸಂಚಾರದ ಕಾರಣ ಸಿಲ್ಕ್‌ಬೋರ್ಡ್ ಅನ್ನು ಸಿಗ್ನಲ್ ಮುಕ್ತ ಮಾಡಲು ಸಾಧ್ಯವಿಲ್ಲ. ಆದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಪೊಲೀಸರು ಭರವಸೆ ಹೊಂದಿದ್ದಾರೆ.
ಈಗಾಗಲೇ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಸಾವಿರಾರು ಜನರು ಈ ಮಾರ್ಗದಲ್ಲಿ ವಾಹನ ಬಿಟ್ಟು ಮೆಟ್ರೋ ಏರಿದ್ದಾರೆ. ಈಗ ಡಬಲ್ ಡೆಕ್ಕರ್ ಫ್ಲೈ ಓವರ್ ಎರಡೂ ಕಡೆ ಸಂಚಾರಕ್ಕೆ ಮುಕ್ತವಾದರೆ ರಸ್ತೆಯಲ್ಲಿ ವಾಹನ ದಟ್ಟಣೆ ಇನ್ನಷ್ಟು ಕಡಿಮೆಯಾಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


