ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿಗೆ ಸಕಲ ತಯಾರಿ ನಡೆದಿದೆ. ನವೆಂಬರ್ 28ರ ಶುಕ್ರವಾರ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಉಡುಪಿ ಜಿಲ್ಲಾಡಳಿತ ಈಗಾಗಲೇ ಕಾರ್ಯಕ್ರಮದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೋದಿ ಭದ್ರತೆ ಉಸ್ತುವಾರಿ ಹೊಣೆ ಹೊತ್ತಿರುವ ಎಸ್‌ಪಿಜಿ ನಗರಕ್ಕೆ ಆಗಮಿಸಿದ್ದು, ಪ್ರಧಾನಿಗಳ ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಿದೆ.
ನರೇಂದ್ರ ಮೋದಿ ರೋಡ್ ಶೋ, ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಸ್ವರೂಪ ಟಿ.ಕೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಢಾಧಿಕಾರಿ ಉಡುಪಿ ಜಿಲ್ಲೆ ಆದೇಶವನ್ನು ಹೊರಡಿಸಿದ್ದಾರೆ.
ಆದೇಶದ ವಿವರ: ಈ ಆದೇಶ ಭಾರತದ ಸನ್ಮಾನ್ಯ ಪ್ರಧಾನಮಂತ್ರಿಯವರು ದಿನಾಂಕ 28.11.2025 ರಂದು ಉಡುಪಿ ನಗರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಶಿಷ್ಟಾಚಾರವನ್ನು ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಸನ್ಮಾನ್ಯ ಭಾರತದ ಪ್ರಧಾನ ಮಂತ್ರಿಯವರು ದಿನಾಂಕ 28.11.2025ರಂದು ಉಡುಪಿ ಜಿಲ್ಲೆಯ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ನಿಯಮಾನುಸಾರ ಶಿಷ್ಟಾಚಾರವನ್ನು ಪಾಲಿಸಬೇಕಾಗುವುದರಿಂದ ಹಾಗೂ ಸನ್ಮಾನ್ಯ ಪ್ರಧಾನಮಂತ್ರಿಯವರ ಜಿಲ್ಲಾ ಭೇಟಿ ಸಂದರ್ಭದಲ್ಲಿ ಕೇಂದ್ರ ಸಚಿವರು, ಕರ್ನಾಟಕ ಗೌರವಾನ್ವಿತ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು, ರಾಜ್ಯ ಸಚಿವರುಗಳು ಹಾಗೂ ಮುಖ್ಯ ಕಾರ್ಯದರ್ಶಿಗಳು ಬರುವ ಸಾಧ್ಯತೆ ಇರುವುದರಿಂದ, ಸುರಕ್ಷತೆ, ಭದ್ರತೆ ಹಾಗೂ ಸೂಕ್ತ ಶಿಷ್ಟಾಚಾರ ಪಾಲಿಸಬೇಕಿದೆ.
ದಿನಾಂಕ 28.11.2025 ರಂದು ಕಾರ್ಯಕ್ರಮ ಸುಗಮವಾಗಿ ಜರುಗಲು ಮತ್ತು ಶಿಸ್ತು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧೀಕ್ಷಕರು, ಜಿಲ್ಲಾ ಪೊಲೀಸ್, ಉಡುಪಿ ಇವರು ಕೋರಿರುತ್ತಾರೆ.
ಈ ಹಿನ್ನಲೆಯಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಉಡುಪಿ ಭೇಟಿ ಸಂದರ್ಭದಲ್ಲಿ ಶಾಲಾ ಮಕ್ಕಳ ಸಂಚಾರಕ್ಕೆ ತೊಡಕು ಉಂಟಾಗುವ ಸಾಧ್ಯತೆಗಳಿರುವುದರಿಂದ, ಶಾಲಾ ಮಕ್ಕಳ ಸುರಕ್ಷತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಒಂದು ದಿನದ ರಜೆ ಘೋಷಣೆ ಮಾಡಲಾಗಿದೆ.
ಉಡುಪಿ ನಗರ ಠಾಣಾ ವ್ಯಾಪ್ತಿ, ಮಲ್ಪೆ ಠಾಣಾ ವ್ಯಾಪ್ತಿ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಿನಾಂಕ 28/11/2025 ರಂದು ಒಂದು ದಿನದ ಮಟ್ಟಿಗೆ ರಜೆಯನ್ನು ಘೋಷಿಸಿ ಆದೇಶಿಸಿದೆ. ಪ್ರಸ್ತುತ ನೀಡಿರುವ ರಜೆ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯವನ್ನು ಇತರೆ ಸಾರ್ವತ್ರಿಕ ರಜಾದಿನಗಳಂದು ಸರಿದೂಗಿಸಿಕೊಂಡು ನಿರ್ವಹಿಸುವುದು ಎಂದು ಸೂಚಿಸಲಾಗಿದೆ.
ಮೋದಿ ರೋಡ್ ಶೋ: ನರೇಂದ್ರ ಮೋದಿ ಉಡುಪಿ ಭೇಟಿ ಸಮಯದಲ್ಲಿ ಜಿಲ್ಲಾ ಬಿಜೆಪಿ ಘಟಕ ರೋಡ್ ಶೋ ಆಯೋಜನೆ ಮಾಡಿದೆ. ಬನ್ನಂಜೆಯಿಂದ ಕಲ್ಸಂಕ ತನಕ ಈ ರೋಡ್ ಶೋ ನಡೆಯಲಿದೆ.
ನರೇಂದ್ರ ಮೋದಿ ಶ್ರೀ ಕೃಷ್ಣಮಠದಲ್ಲಿ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೂ ಮೊದಲು ಅವರು ರೋಡ್ ಶೋ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ.
ಈ ಎರಡು ಕಾರ್ಯಕ್ರಮಗಳ ನಡುವೆ ಯಾವುದೇ ಗೊಂದಲವಿಲ್ಲ. ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಕ್ದ ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಲಿದ್ದಾರೆ. ಮಠದ ಅಪಾರ ಭಕ್ತರು ಸೇರಿಕೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ರೋಡ್ ಶೋನಲ್ಲಿ ಜಿಲ್ಲೆಯ 112 ಬೂತ್‌ಗಳ ಕಾರ್ಯಕರ್ತರು, ಹಿತೈಷಿಗಳು ವಿಶೇಷವಾಗಿ ಯುವ ಜನರು ಪಾಲ್ಗೊಳ್ಳಲಿದ್ದಾರೆ. ಹೆಲಿಪ್ಯಾಡ್‌ನಿಂದ ಬನ್ನಂಜೆಯ ಡಾ.ವಿ.ಎಸ್.ಆಚಾರ್ಯ ಬಸ್ ನಿಲ್ದಾಣದ ತನಕ ಮೋದಿ ನೇರವಾಗಿ ಬರಲಿದ್ದು, ಬನ್ನಂಜೆಯಿಂದ ಕಲ್ಸಂಕ ತನಕ ರೋಡ್ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


