ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಡುಗೆಯೊಂದನ್ನು ನೀಡಿದೆ. ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಘೋಷಣೆಯಾಗಿದೆ. ಹಲವು ದಿನಗಳಿಂದ ಪ್ರಸ್ತಾವನೆಯಲ್ಲಿದ್ದ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ.
ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್)-ಎರ್ನಾಕುಲಂ ನಡುವೆ ಸಂಚಾರವನ್ನು ನಡೆಸಲಿದೆ. ಬುಧವಾರ ಹೊರತುಪಡಿಸಿ ವಾರದಲ್ಲಿ 6 ದಿನ ಈ ರೈಲು ಬೆಂಗಳೂರು ಮತ್ತು ಕೇರಳವನ್ನು ಸಂಪರ್ಕಿಸಲಿದೆ.
ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ನಡುವೆ ರೈಲು ನಂಬರ್ 26651/ 26652 ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ನೀಡಿದೆ. ರೈಲು ಸಂಚಾರ ಯಾವಾಗ ಆರಂಭ? ಎಂಬ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ.
ವೇಳಾಪಟ್ಟಿ ನಿಲ್ದಾಣಗಳು: ರೈಲ್ವೆ ಇಲಾಖೆ ಮಾಹಿತಿ ಪ್ರಕಾರ ರೈಲು ನಂಬರ್ 26651 ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ರೈಲು ಬೆಂಗಳೂರು ನಗರದಿಂದ ಬೆಳಗ್ಗೆ 5.10ಕ್ಕೆ ಹೊರಡಲಿದೆ. ಏರ್ನಾಕುಲಂಗೆ ಮಧ್ಯಾಹ್ನ 1.50ಕ್ಕೆ ತಲುಪಲಿದೆ.
ರೈಲು ನಂಬರ್ 26652 ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ರೈಲು ಮಧ್ಯಾಹ್ನ 2.30ಕ್ಕೆ ಎರ್ನಾಕುಲಂನಿಂದ ಹೊರಡಲಿದೆ. ರಾತ್ರಿ 11 ಗಂಟೆಗೆ ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಮಾರ್ಗದಲ್ಲಿ ಕೆ.ಆರ್.ಪುರ, ಸೇಲಂ, ಇರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶೂರ್ ನಿಲ್ದಾಣದಲ್ಲಿ ನಿಲುಗಡೆ ಹೊಂದಿದೆ. ಬುಧವಾರ ಹೊರತುಪಡಿಸಿ ವಾರದ 6 ದಿನ ಸಂಚಾರವನ್ನು ನಡೆಸಲಿದೆ.
ನಿಲ್ದಾಣದ ಆಗಮನ/ ನಿರ್ಗಮ ವೇಳಾಪಟ್ಟಿ

ಈ ಸಭೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ‘ತ್ರಿಶೂರ್, ಪಾಲಕ್ಕಾಡ್ ಮಾರ್ಗವಾಗಿ ಎರ್ನಾಕುಲಂನಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಸೇವೆಯನ್ನು ಅನುಮೋದಿಸಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಗಳು. ಬೆಂಗಳೂರಿನಲ್ಲಿ ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಬಹಳಷ್ಟು ಕೇರಳದ ಜನರು ಕೆಲಸ ಮಾಡುತ್ತಿದ್ದಾರೆ. ದೀರ್ಘಕಾಲದಿಂದ ಕೇರಳ-ಬೆಂಗಳೂರು ನಡುವೆ ಹೆಚ್ಚಿನ ರೈಲು ಸೇವೆಗಳ ಅಗತ್ಯವಿದೆ ಎಂದು ಬೇಡಿಕೆ ಇಡಲಾಗಿತ್ತು’ ಎಂದು ತಿಳಿಸಿದ್ದರು.
ಕೇರಳ-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಈ ಹೊಸ ವಂದೇ ಭಾರತ್ ರೈಲು ಸೇವೆ ಅನುಕೂಲವಾಗಲಿದೆ. ಹಬ್ಬದ ಸಮಯಗಳಲ್ಲಿ ಮತ್ತು ಸಾಲು ಸಾಲು ರಜೆ ಸಂದರ್ಭದಲ್ಲಿ ಬೆಂಗಳೂರು-ಕೇರಳ ಮಾರ್ಗದ ಎಲ್ಲಾ ರೈಲುಗಳು ಭರ್ತಿಯಾಗುತ್ತಿದ್ದವು.
ರೈಲು, ಬಸ್‌ಗಳಲ್ಲಿ ಸೀಟು ಸಿಗದೇ ಖಾಸಗಿ ವಾಹನಗಳಿಗೆ ದುಬಾರಿ ಬಾಡಿಗೆ ಪಾವತಿ ಮಾಡಿ ಸಂಚಾರವನ್ನು ನಡೆಸಬೇಕಾಗಿತ್ತು. ಈ ರೈಲು ಸೇವೆಯಿಂದ ಬೆಂಗಳೂರು-ಕೇರಳ ನಡುವೆ ಪ್ರವಾಸಕ್ಕೆ ಸಂಚಾರ ನಡೆಸುವ ಜನರಿಗೂ ಅನುಕೂಲವಾಗಲಿದೆ.
ಕರ್ನಾಟಕದಲ್ಲಿ ಸದ್ಯ 8ಕ್ಕೂ ಅಧಿಕ ವಂದೇ ಭಾರತ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಕಳೆದ ವಾರ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಸೇವೆಗೆ ಅನುಮೋದನೆ ನೀಡಿದ್ದ ಕೇಂದ್ರ ಸರ್ಕಾರ, ಈ ವಾರ ಬೆಂಗಳೂರು-ಎರ್ನಾಕುಲಂ ಹೊಸ ವಂದೇ ಭಾರತ್ ರೈಲು ಸೇವೆ ಒಪ್ಪಿಗೆ ನೀಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


