ರಾಯ್‌ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ಗೆಲುವು ಸಾಧಿಸಿದೆ.
ಈ ಮೂಲಕ ಮೊದಲ ಪಂದ್ಯದ ಸೋಲಿನ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡಿದ್ದು, 3 ಪಂದ್ಯಗಳ ಸರಣಿಯಲ್ಲಿ ಇತ್ತಂಡಗಳು 1 – 1 ಅಂತರದ ಸಮಬಲ ಸಾಧಿಸಿವೆ. ಈ ನಿಟ್ಟಿನಲ್ಲಿ ಡಿಸೆಂಬರ್ 6ರ ಶನಿವಾರದಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಅಂತಿಮ ಪಂದ್ಯ ಸರಣಿಯ ಫೈನಲ್ ಆಗಿ ಮಾರ್ಪಟ್ಟಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿರಾಟ್ ಕೊಹ್ಲಿ ಹಾಗೂ ರುತುರಾಜ್ ಗಾಯಕ್ವಾಡ್ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 358 ರನ್ ಬಾರಿಸಿ ದಕ್ಷಿಣ ಆಫ್ರಿಕಾಗೆ 359 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ದಕ್ಷಿಣ ಆಫ್ರಿಕಾ 49.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 359 ರನ್ ಕಲೆಹಾಕಿತು.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 22 ರನ್ ಹಾಗೂ ರೋಹಿತ್ ಶರ್ಮಾ 14 ರನ್‌ಗೆ ಔಟ್ ಆದರು. ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ರುತುರಾಜ್ ಗಾಯಕ್ವಾಡ್ ಹಾಗೂ ವಿರಾಟ್ ಕೊಹ್ಲಿ 195 ರನ್‌ಗಳ ಜತೆಯಾಟವನ್ನಾಡಿದರು. ರುತುರಾಜ್ ಗಾಯಕ್ವಾಡ್ 83 ಎಸೆತಗಳಲ್ಲಿ 105 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 93 ಎಸೆತಗಳಲ್ಲಿ 102 ರನ್ ಬಾರಿಸಿ ತಂಡವನ್ನು ಒಂದೊಳ್ಳೆ ಹಂತಕ್ಕೆ ಕೊಂಡೊಯ್ದರು.
ಇನ್ನುಳಿದಂತೆ ಕೆಎಲ್ ರಾಹುಲ್ ಅಜೇಯ 66 ರನ್ ಬಾರಿಸಿದರೆ, ವಾಷಿಂಗ್ಟನ್ ಸುಂದರ್ 1 ರನ್ ಹಾಗೂ ರವೀಂದ್ರ ಜಡೇಜಾ ಅಜೇಯ 24 ರನ್ ಬಾರಿಸಿದರು.
ದಕ್ಷಿಣ ಆಫ್ರಿಕಾದ ಪರ ಮಾರ್ಕೊ ಯಾನ್ಸೆನ್ ಎರಡು ವಿಕೆಟ್, ನಾಂಡ್ರೆ ಬರ್ಗರ್ ಹಾಗೂ ಲುಂಗಿ ಎನ್‌ಗಿಡಿ ತಲಾ ಒಂದೊಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ ಕೇವಲ 8 ರನ್‌ಗೆ ವಿಕೆಟ್ ಒಪ್ಪಿಸಿದರೆ ಎರಡನೇ ವಿಕೆಟ್‌ಗೆ ಜತೆಯಾದ ಏಡನ್ ಮಾರ್ಕ್ರಮ್ ಹಾಗೂ ಟೆಂಬಾ ಬವುಮಾ 101 ರನ್‌ಗಳ ಜತೆಯಾಟವನ್ನಾಡಿ ಆರಂಭಿಕ ಆಘಾತ ಅನುಭವಿಸಿದ್ದ ತಂಡಕ್ಕೆ ಸುಧಾರಣೆ ತಂದರು. ಟೆಂಬಾ ಬವುಮಾ 46 ರನ್ ಬಾರಿಸಿದರೆ, ಮಾರ್ಕ್ರಮ್ 110 ರನ್ ಬಾರಿಸಿದರು. ಈ ಇಬ್ಬರ ವಿಕೆಟ್ ಬಳಿಕ ಮ್ಯಾಥ್ಯೂ ಬ್ರೀಟ್ಜ್ಕೆ 68 ರನ್ ಹಾಗೂ ಡಿವಾಲ್ಡ್ ಬ್ರೆವಿಸ್ 54 ರನ್ ಬಾರಿಸಿ ತಂಡವನ್ನು ಸುರಕ್ಷಿತ ಹಂತಕ್ಕೆ ತಂದರು. ಮಾರ್ಕೊ ಯಾನ್ಸೆನ್ 2 ರನ್ ಗಳಿಸಿದರೆ, ಟೋನಿ ಡಿ ಝೋರ್ಝಿ 17 ರನ್ ಗಳಿಸಿದ್ದಾಗ ಗಾಯಕ್ಕೊಳಗಾಗಿ ಪೆವಿಲಿಯನ್‌ಗೆ ಮರಳಿದರು. ಅಂತಿಮ ಹಂತದಲ್ಲಿ ಜವಾಬ್ದಾರಿಯುತ ಆಟವನ್ನಾಡಿದ ಕಾರ್ಬಿನ್ ಬಾಷ್ ಅಜೇಯ 26 ರನ್ ಗಳಿಸಿದರೆ, ಕೇಶವ್ ಮಹಾರಾಜ್ ಅಜೇಯ 10 ರನ್ ಗಳಿಸಿದರು.
ಭಾರತದ ಪರ ಅರ್ಷ್‌ದೀಪ್ ಸಿಂಗ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್, ಹರ್ಷಿತ್ ರಾಣಾ ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಶತಕ ಬಾರಿಸಿ ಅಬ್ಬರಿಸಿದ ಕೊಹ್ಲಿ; ಬ್ಯಾಕ್‌ಟುಬ್ಯಾಕ್ ಸೆಂಚುರಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


