ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎರಡು ದಿನಗಳ ಭಾರತ ಪ್ರವಾಸ ಮುಗಿಸಿ ವಾಪಸ್ ಆಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ನಡುವೆಯೇ ಭಾರತಕ್ಕೆ ಕಚ್ಚಾತೈಲ ಪೂರೈಕೆ ಮಾಡುವ ಅಭಯವನ್ನು ಭಾರತದ ನೆಲದಲ್ಲಿಯೇ ಪುಟಿನ್ ನೀಡಿದ್ದಾರೆ. ಹಲವು ಕಾರಣಕ್ಕೆ ಈಗ ಡೊನಾಲ್ಡ್ ಟ್ರಂಪ್ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಮಿತ್ರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಾರೆ. ಈಗ ದೇಶದ ರಾಜ್ಯವೊಂದರಲ್ಲಿ ರಸ್ತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲು ನಿರ್ಣಯ ಮಂಡಿಸಲಾಗಿದೆ.
ಹೌದು, ತೆಲಂಗಾಣ ಸರ್ಕಾರ ಹೈದರಾಬಾದ್‌ನ ರಸ್ತೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ಇಡಲಿದೆ. ನಾನಕ್‌ರಾಮಗೂಡದಲ್ಲಿರುವ ಅಮೆರಿಕ ಕಾನ್ಸುಲೆಟ್ ಜನರಲ್ ಕಟ್ಟಡವಿರುವ ರಸ್ತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲು ತೀರ್ಮಾನಿಸಲಾಗಿದೆ.
ತೆಲಂಗಾಣ ಸರ್ಕಾರದ ಘೋಷಣೆ: ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಎರಡು ವರ್ಷ ಪೂರ್ಣಗೊಂಡಿದೆ. ಆದ್ದರಿಂದ ಡಿಸೆಂಬರ್ 13ರ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಭಾನುವಾರ ರಾಜ್ಯ ಸರ್ಕಾರ ಹೈದರಾಬಾದ್‌ನ (ಫೈನಾನ್ಸಿಯಲ್ ಡಿಸ್ಟ್ರಿಕ್ಟ್) ನಾನಕ್‌ರಾಮಗೂಡದಲ್ಲಿರುವ ಅಮೆರಿಕ ಕಾನ್ಸುಲೆಟ್ ಜನರಲ್ ಕಟ್ಟಡವಿರುವ ರಸ್ತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲಾಗುತ್ತದೆ ಎಂದು ಘೋಷಣೆ ಮಾಡಿದೆ.
ಡೊನಾಲ್ಡ್ ಟ್ರಂಪ್ ಮಾತ್ರವಲ್ಲ ರಸ್ತೆಗಳಿಗೆ ದಿ.ರತನ್ ಟಾಟಾ ಸೇರಿದಂತೆ ವಿಪ್ರೋ, ಮೈಕ್ರೋಸಾಫ್ಟ್ ಸಂಸ್ಥಾಪಕರ ಹೆಸರುಗಳನ್ನು ಮುಂದಿನ ದಿನದಲ್ಲಿ ಇಡಲಾಗುತ್ತದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಹೇಳಿದೆ.
ಹೈದರಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಗೂಗಲ್ ಕ್ಯಾಂಪಸ್ ನಿರ್ಮಾಣವಾಗುತ್ತಿದೆ. ಈ ರಸ್ತೆಗೆ ಗೂಗಲ್ ಹೆಸರಿಡಲು ಸಹ ತೀರ್ಮಾನ ಮಾಡಲಾಗಿದೆ. ಗೂಗಲ್ ಮತ್ತು ಗೂಗಲ್ ಮ್ಯಾಪ್ ಜಾಗತಿಕವಾಗಿ ಮಾಡಿರುವ ಪರಿಣಾಮಗಳನ್ನು ಶ್ಲಾಘನೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರೆ ತಿಳಿಸಿದೆ.
ಹೈದರಾಬಾದ್‌ನ ಪ್ರಮುಖ ರಸ್ತೆಗಳಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕರು, ಕಂಪನಿಗಳ ಹೆಸರನ್ನು ಇಡಲಾಗುತ್ತದೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ವರ್ಷದ ಜನವರಿಯಲ್ಲಿ ಘೋಷಣೆ ಮಾಡಿದ್ದರು. ಈಗ ಸರ್ಕಾರ ಎರಡು ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ರಸ್ತೆಗಳಿಗೆ ನಾಮಕರಣ ಮಾಡುವ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಅಮೆರಿಕ ರಾಯಭಾರ ಕಚೇರಿಗಳಿಗೆ ಶೀಘ್ರವೇ ಪತ್ರವನ್ನು ಬರೆಯಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಕಾರಣಕ್ಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರು ಮೊದಲು ಭಾರತದ ಮೇಲೆ ಶೇ 25ರಷ್ಟು ಸುಂಕವನ್ನು ಹೇರಿದ್ದರು. ಬಳಿಕ ಆಗಸ್ಟ್‌ನಲ್ಲಿ ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದಕ್ಕೆ ಪ್ರತಿಯಾಗಿ ಭಾರತದ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ವಿಧಿಸಿದ್ದರು.
ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ನಡುವೆಯೇ ಭಾರತಕ್ಕೆ ತೈಲ ಪೂರೈಕೆ ಮಾಡಲಾಗುತ್ತದೆ ಎಂದು ದೆಹಲಿಯಲ್ಲಿಯೇ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಹೇಳಿದ್ದಾರೆ. 2026ರಲ್ಲಿ ಭಾರತಕ್ಕೆ ಭೇಟಿ ನೀಡುತ್ತೇನೆ ಎಂದು ಸಹ ಟ್ರಂಪ್ ಈಗಾಗಲೇ ಘೋಷಣೆ ಮಾಡಿದ್ದಾರೆ.
ತೆಲಂಗಾಣದ ಸರ್ಕಾರ ರಾಜ್ಯಕ್ಕೆ ಬಂಡವಾಳ ಹೂಡಿಕೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರಕ್ಕೆ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಸಹ ಆಯೋಜನೆ ಮಾಡಿದೆ. ಎರಡು ದಿನಗಳ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


