ಬೆಂಗಳೂರು ನಗರದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಿಮಾನ ನಿಲ್ದಾಣದ ನಿರ್ಮಾಣದ ಕಾರ್ಯ ಸಾಧ್ಯತಾ ವರದಿಯನ್ನು ತಯಾರಿ ಮಾಡಲು ಕೆಎಸ್‌ಐಐಡಿಸಿ ಟೆಂಡರ್ ಕರೆದಿದೆ. ಯೋಜನೆಗೆ ಮೂರು ಸ್ಥಳಗಳನ್ನು ಗುರುತಿಸಲಾಗಿದ್ದು, ಸ್ಥಳ ಅಂತಿಮಗೊಳಿಸಬೇಕಿದೆ.
ಹಲವು ದಿನಗಳಿಂದ ಬೆಂಗಳೂರು ನಗರದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಕುರಿತು ಚರ್ಚೆಗಳು ನಡೆಯುತ್ತಿತ್ತು. ಈಗ ಈ ಕುರಿತು ಕಾರ್ಯಸಾಧ್ಯತಾ ವರದಿಯನ್ನು ತಯಾರು ಮಾಡಲು ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಟೆಂಡರ್ ಕರೆದಿದೆ.
ಸಂಸ್ಥೆ ಮೂರು ಸ್ಥಳ ಕುರಿತು ವಿವರವಾದ ಪರಿಶೀಲನೆಯನ್ನು ನಡೆಸಿ, ತಾಂತ್ರಿಕ ಅಂಶಗಳನ್ನು ಗಮನಿಸಿ ಬೆಂಗಳೂರು ನಗರದ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಸ್ಥಳ ಯಾವುದು? ಎಂದು ವರದಿಯನ್ನು ನೀಡಿದೆ. ಬಳಿಕ ಸ್ಥಳ ಅಂತಿಮವಾಗಲಿದೆ.
ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಗುರುತಿಸಿರುವ ಮೂರು ಸ್ಥಳಗಳನ್ನು ಈಗಾಗಲೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡ ಪರಿಶೀಲನೆ ನಡೆಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ದಟ್ಟಣೆ ಹಿನ್ನಲೆಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದೆ.
ಕಾರ್ಯಸಾಧ್ಯತಾ ವರದಿ 2ನೇ ವಿಮಾನ ನಿಲ್ದಾಣ ಯೋಜನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ. ಏಕೆಂದರೆ ಎಲ್ಲಿ ನಿಲ್ದಾಣ ನಿರ್ಮಾಣವಾಗಬೇಕು? ಎಂಬುದನ್ನು ಅದು ಅಂತಿಮಗೊಳಿಸಲಿದೆ. ಕನಕಪುರ ಕಡೆ, ತುಮಕೂರು ರಸ್ತೆಯಲ್ಲಿ ಎಂದು ಸ್ಥಳದ ವಿಚಾರದಲ್ಲಿ ಪೈಪೋಟಿ ನಡೆಯುತ್ತಿದೆ.
ವಾರ್ಷಿಕ 30 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ವಿಮಾನ ನಿಲ್ದಾಣವನ್ನು ಕರ್ನಾಟಕ-ತಮಿಳುನಾಡು ಗಡಿಯ ಹೊಸೂರಿನಲ್ಲಿ ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಮುಂದಾಗಿದೆ. ಕರ್ನಾಟಕಕ್ಕಿಂತ ಈ ಯೋಜನೆಯಲ್ಲಿ ತಮಿಳುನಾಡು ಮುಂದೆ ಇದೆ. ಆದ್ದರಿಂದ ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆ ಈಗ ವೇಗಪಡೆದುಕೊಳ್ಳುತ್ತಿದೆ.
ಕನಕಪುರ ರಸ್ತೆಯ ಚೌಡಹಳ್ಳಿ, ಸೋಮನಹಳ್ಳಿ ಪ್ರದೇಶ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯನ್ನು 2ನೇ ವಿಮಾನ ನಿಲ್ದಾಣ ಯೋಜನೆಗಾಗಿ ಗುರುತಿಸಲಾಗಿದೆ. ಈ ಪ್ರದೇಶಗಳನ್ನು ಎಎಐ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಆದ್ದರಿಂದ ಈಗ ಕಾರ್ಯ ಸಾಧ್ಯತಾ ವರದಿ ತಯಾರು ಮಾಡಲು ಟೆಂಡರ್ ಕರೆಯಲಾಗಿದೆ.
ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಸಿನ ಯೋಜನೆಯಾಗಿದೆ. 4,500 ಎಕರೆ ಪ್ರದೇಶವನ್ನು ಯೋಜನೆಗಾಗಿ ಗುರುತಿಸಲಾಗಿದ್ದು, ಎಲ್ಲಿ ವಿಮಾನ ನಿಲ್ದಾಣ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಡಿ.ಕೆ.ಶಿವಕುಮಾರ್ ಕನಕಪುರ ಕಡೆ, ಗೃಹ ಸಚಿವ ಡಾ.ಜಿ.ಪರಮೇಶ್ವರ ತುಮಕೂರು ರಸ್ತೆಯಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಜಟಾಪಟಿ ನಡೆಸುತ್ತಿದ್ದಾರೆ. ಕನಕಪುರ ಕಡೆಯ ಜಾಗ ಚೆನ್ನಾಗಿದ್ದು, ಅಲ್ಲಿಯೇ ವಿಮಾನ ನಿಲ್ದಾಣವಾಗಬೇಕು ಎಂಬುದು ಬೇಡಿಕೆಯಾಗಿದೆ.
ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಇನ್ನೂ ಕೆಲವು ಪ್ರದೇಶಗಳನ್ನು ಗುರುತಿಸಿದೆ. ಈ ಎಲ್ಲಾ ಪ್ರದೇಶದಲ್ಲಿ ಯೋಜನೆ ಕೈಗೊಳ್ಳಲು ಇರುವ ಸಾಧ್ಯತೆಗಳ ಕುರಿತು ವರದಿ ತಯಾರಾಗಲಿದೆ. ವೆಚ್ಚ, ಭೂಮಿಯ ಲಭ್ಯತೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಸೇರಿದಿ ಕಾರ್ಯಾಸಾಧ್ಯತಾ ವರದಿ ಸಿದ್ಧವಾಗಲಿದೆ.
ಯೋಜನೆ ಕುರಿತು ಸಮಗ್ರವಾದ ತಾಂತ್ರಿಕ ಕಾರ್ಯಸಾಧ್ಯತಾ ವರದಿ ಭೂಮಿಯ ಸ್ವರೂಪ, ತಾಂತ್ರಿಕ ಅಂಶಗಳು, ಹವಾಮಾನ, ಅಡಚಣೆಗಳು, ಮಣ್ಣಿನ ಮೌಲ್ಯಮಾಪನಗಳು ಮತ್ತು ವಿದ್ಯುತ್ ಮಾರ್ಗಗಳು ಹಾಗೂ ಇತರ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತದೆ.
ವರದಿಯಲ್ಲಿ ಸಂಚಾರದ ಬೇಡಿಕೆ ಸೇರಿರುತ್ತದೆ. ಮುಂದಿನ 35 ವರ್ಷಗಳ ಅವಧಿಗೆ ಪ್ರಯಾಣಿಕ ಮತ್ತು ಸರಕು ಸಾಗಣೆ ವಿಮಾನಗಳ ಸಂಚಾರ ಅಲ್ಲಿಗೆ ತಲುಪಲು ರಸ್ತೆ, ರೈಲು ಹಾಗೂ ವಾಯು ಸಂಪರ್ಕದ ಅವಶ್ಯಕತೆಗಳನ್ನು ಸೇರಿಸಲಾಗುತ್ತದೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕ ಮತ್ತು ಸರಕು ಸಾಗಣೆ ಕಾರ್ಯಾಚರಣೆ, ಯೋಜನಾ ವೆಚ್ಚದ ಹಿನ್ನಲೆಯಲ್ಲಿ ಆರ್ಥಿಕ ಕಾರ್ಯಸಾಧ್ಯತೆ ಸೇರಿದಂತೆ ವಿವಿಧ ಅಂಶಗಳನ್ನು ಸೇರಿಸಿ ವರದಿಯನ್ನು ತಯಾರಿಸಿ ಸಲ್ಲಿಕೆ ಮಾಡಲಾಗುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


