ನಿನ್ನೆ ( ಡಿಸೆಂಬರ್ 16 ) ಅಬುದಾಬಿಯ ಇತಿಹಾದ್ ಅರೆನಾ ಹೊಟೇಲ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಿನಿ ಹರಾಜು ಪ್ರಕ್ರಿಯೆ ನಡೆಯಿತು. ಎಲ್ಲ ತಂಡಗಳು ರಿಟೆನ್ಷನ್‌ನಿಂದ ತೆರವಾಗಿದ್ದ ಸ್ಥಾನಗಳಿಗೆ ಹೊಸ ಆಟಗಾರರನ್ನು ಆರಿಸಿಕೊಂಡವು.
ಈ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕೆಮರೂನ್ ಗ್ರೀನ್ ಬರೋಬ್ಬರಿ 25.2 ಕೋಟಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಬೆಲೆಗೆ ಮಾರಾಟವಾದ ವಿದೇಶಿ ಆಟಗಾರ ಎಂಬ ದಾಖಲೆಯನ್ನು ಕೆಮರೂನ್ ಗ್ರೀನ್ ಬರೆದರು.
ಹೀಗೆ ನಿನ್ನೆ ದಾಖಲೆ ಬರೆದ ಗ್ರೀನ್ ಇಂದು ಆರಂಭವಾಗಿರುವ ಮೂರನೇ ಆಶಸ್ ಟೆಸ್ಟ್ ಪಂದ್ಯದಲ್ಲಿ ಡಕ್‌ಔಟ್ ಆಗಿದ್ದಾರೆ. ಅಡಿಲೇಡ್‌ನ ಓವಲ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಆಸ್ಟ್ರೇಲಿಯಾ ಪರ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಎರಡು ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೇ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಸದ್ಯ ಗ್ರೀನ್ ದಾಖಲೆಯ ಮೊತ್ತಕ್ಕೆ ಹರಾಜಾದ ಮಾರನೇ ದಿನಕ್ಕೆ ಡಕ್‌ಔಟ್ ಆಗಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳು ವ್ಯಕ್ತವಾಗುತ್ತಿವೆ.
ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಚಹಾ ವಿರಾಮದ ಸಮಯಕ್ಕೆ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದೆ.
ಮೊದಲೆರಡು ಪಂದ್ಯಗಳಲ್ಲಿ ಜಯ ಗಳಿಸಿರುವ ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆದ್ದರೆ ಆಶಸ್ ಸರಣಿಯನ್ನು ಕೈವಶಪಡಿಸಿಕೊಳ್ಳಲಿದ್ದು, ಮತ್ತೊಂದು ಪ್ರವಾಸದಲ್ಲಿ ಇಂಗ್ಲೆಂಡ್ ಬರಿಗೈನಲ್ಲಿ ವಾಪಸ್ಸಾಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


