ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಹಿಟ್ & ರನ್ ಪ್ರಕರಣವನ್ನು ಭೇದಿಸಿದ್ದಾರೆ. ಅಪಘಾತದ ಬಳಿಕ ವ್ಯಕ್ತಿಯ ಮೇಲೆ ಕಾರು ಹರಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಕಾರಿನ ನಂಬರ್ ಇಲ್ಲದಿದ್ದರೂ ಸಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 13ರಂದು ಶಶಿಕುಮಾರ್ ( 20 ) ಎಂಬ ಯುವಕ ಮಧ್ಯರಾತ್ರಿ 2 ಗಂಟೆಗೆ ವೇಗವಾಗಿ ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿ ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದ. ಈ ವೇಳೆ ಎದುರುಗಡೆ ವೇಗವಾಗಿ ಕಾರು ಬರುತ್ತಿದ್ದನ್ನು ಕಂಡು ಗಾಬರಿಗೊಂಡಿದ್ದಾನೆ. ಈ ಸಂದರ್ಭದಲ್ಲಿ ಬೈಕ್ ಜಾರಿ ಬಿದ್ದಿದೆ. ಇದನ್ನು ಕಂಡ ಕಾರು ಚಾಲಕ ಕಾಜಾ ಮೊಹಿದ್ದಿನ್ ಅಲ್ಲಿಯೇ ಕಾರು ನಿಲ್ಲಿಸಿದ್ದಾನೆ.
ನಂತರ ಬೈಕ್ ಸವಾರ ಶಶಿಕುಮಾರ್ ಕಾರಿನ ಮುಂದೆ ಬಂದು ಬಿದ್ದಿದ್ದಾನೆ. ಆದರೆ ಕಾಜಾ ಮೊಹಿದ್ದಿನ್ ಕಾರನ್ನು ಶಶಿಕುಮಾರ್ ಮೇಲೆ ಹರಿಸಿ ಅಲ್ಲಿಂದ ಪರಾರಿಯಾಗಿದ್ದ. ಇನ್ನು ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಈ ದೃಶ್ಯದಲ್ಲೆಲ್ಲೂ ಕಾರಿನ ನಂಬರ್ ಪ್ಲೇಟ್ ಸೆರೆಯಾಗಿರಲಿಲ್ಲ.
ಹೀಗೆ ನಂಬರ್ ಪ್ಲೇಟ್ ಇಲ್ಲದ ಕಾರನ್ನು ಪತ್ತೆ ಹಚ್ಚಲು ಪೊಲೀಸರು ಕಾರಿನ ಹಿಂದೆ ಇದ್ದ ʼಎಂಎಸ್ʼ ಎಂಬ ಸ್ಟಿಕರ್, ಮುಂದಿನ ಚಕ್ರಕ್ಕೆ ಮಾತ್ರ ವೀಲ್ ಕ್ಯಾಪ್ ಇದ್ದು ಹಿಂದಿನ ಚಕ್ರಕ್ಕೆ ವೀಲ್ ಕ್ಯಾಪ್ ಇಲ್ಲದಿರುವುದು ಹಾಗೂ ಗಾಜಿನ ಮೇಲೆ ಇದ್ದ ಸನ್‌ಗಾರ್ಡ್ ಅನ್ನು ಆಧರಿಸಿ ಸುಮಾರು 200ಕ್ಕೂ ಹೆಚ್ಚಿನ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಒಂದು ಸಿಸಿಟಿವಿಯಲ್ಲಿ ಮಾತ್ರ ಈ ಕಾರಿನ ದೃಶ್ಯ ಸಿಕ್ಕಿದ್ದು, ಆರೋಪಿ ಚನ್ನರಾಯಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದನ್ನು ಪತ್ತೆ ಹಚ್ಚಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


