ಇದೇ ೨೫ರಂದು ಕಿಚ್ಚ ಸುದೀಪ್ ನಟನೆಯ ಮಾರ್ಕ್ ಚಿತ್ರ ಬಿಡುಗಡೆಯಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಮ್ಯಾಕ್ಸ್ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಫಲಿತಾಂಶ ಕಂಡಿದ್ದ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಇದೀಗ ಎರಡನೇ ಬಾರಿಗೆ ಮತ್ತೆ ವರ್ಷಾಂತ್ಯಕ್ಕೆ ಸಿನಿ ರಸಿಕರ ಮುಂದೆ ಬರುತ್ತಿದೆ.
ಚಿತ್ರದ ಹಾಡುಗಳು ತಕ್ಕ ಮಟ್ಟಿಗೆ ಹಿಟ್ ಆಗಿದ್ದು, ಚಿತ್ರದ ಟ್ರೈಲರ್ ಅಭಿಮಾನಗಳಿಗೆ ಇಷ್ಟವಾಗಿದೆ ಹಾಗೂ ಸಿನಿ ರಸಿಕರಲ್ಲಿ ಕುತೂಹಲವನ್ನೂ ಸೃಷ್ಟಿ ಮಾಡಿದೆ. ಇನ್ನು ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನೂ ಸಹ ಚಿತ್ರತಂಡ ಮೊನ್ನೆಯಷ್ಟೆ ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಸದ್ಯ ಭಾರೀ ವಿವಾದಕ್ಕೆ ಕಾರಣವಾಗಿದೆ.
ಹೌದು, ಕಿಚ್ಚ ಸುದೀಪ್ ಪಡೆಯೊಂದು ಮಾರ್ಕ್ ಸೋಲಿಸಲು ಸಜ್ಜಾಗುತ್ತಿದೆ ಅವರಿಗೆ ಹೆದರಬೇಡಿ ಎಂಬರ್ಥದಲ್ಲಿ ನೀಡಿರುವ ಹೇಳಿಕೆ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ.
‘ಇದೇ ೨೫ಕ್ಕೆ ಥಿಯೇಟರ್‌ನಲ್ಲಿ ಒಂದು ಸಿನಿಮಾ ಬಿಡುಗಡೆಯಾಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗ್ತಿದೆ. ಈ ವೇದಿಕೆ ಮೇಲೆ ಹೇಳುತ್ತಿದ್ದೇನೆ ಯುದ್ಧಕ್ಕೆ ಸಿದ್ಧ. ಏಕೆಂದರೆ ನಾವು ನಮ್ಮ ಮಾತಿಗೆ ಬದ್ಧ. ಹುಬ್ಬಳ್ಳಿಯಲ್ಲಿ ಮಾತನಾಡಿದರೆ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತೆ. ಹೇಗೆ ತಟ್ಟಬೇಕೋ ತಟ್ಟುತ್ತೆ. ಯಾವ ಭರ್ಜರಿಯಲ್ಲಿ ತಟ್ಟಬೇಕೋ ತಟ್ಟುತ್ತೆ. ಸೈಲೆಂಟ್ ಆಗಿರುವುದು ಒಳ್ಳೆಯದೋ ಕೆಟ್ಟದ್ದೋ ನನಗೆ ಗೊತ್ತಿಲ್ಲ. ಆದರೆ ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎನ್ನುವುದಕ್ಕೋಸ್ಕರ, ನಾವೆಲ್ಲರೂ ಒಳ್ಳೆಯ ಹೆಸರಲ್ಲಿರಬೇಕು ಎನ್ನುವ ಒಂದೇ ಒಂದು ಕಾರಣಕ್ಕೋಸ್ಕರ ನಾನು ಬಾಯಿ, ಎಲ್ಲನೂ ಮುಚ್ಚಿಕೊಂಡು ಇದ್ದೆ ಹೊರತು ಬಾಯಿ ಇಲ್ಲ ಅಂತಲ್ಲ. ನನ್ನ ಸಹನೆಯಿಂದ ಬಹಳಷ್ಟು ಕಲ್ಲಿನ ತೂರಾಟ ನಿಮ್ಮ ಮೇಲೆ ನಡೆಯುತ್ತಲೇ ಬರುತ್ತಿದೆ, ಅದನ್ನು ನೀವು ತಡೆದುಕೊಂಡು ಬರುತ್ತಲೇ ಇದ್ದೀರಿ. ಈಗ ಹೇಳ್ತಾ ಇದ್ದೀನಿ ತಡೆಯುವಷ್ಟು ತಡೆಯಿರಿ. ಮಾತಾಡುವ ಟೈಮ್‌ನಲ್ಲಿ ಮಾತನಾಡಿ’ ಎಂದು ಅಭಿಮಾನಿಗಳಿಗೆ ಸುದೀಪ್ ಕರೆಕೊಟ್ಟಿದ್ದಾರೆ.
ಹೀಗೆ ವೇದಿಕೆ ಮೇಲೆ ಸುದೀಪ್ ಹೇಳಿಕೆ ನೀಡುತ್ತಿದ್ದಂತೆ ಇತ್ತ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಈ ಹೇಳಿಕೆ ತಮಗೆ ನೀಡಿರುವ ಡೈರೆಕ್ಟ್ ಟಾಂಗ್ ಎಂದು ಕಿಡಿಕಾರಿದ್ದಾರೆ. ಸುದೀಪ್ ವಿರುದ್ಧ ಟ್ರೋಲ್ ಮಳೆಯನ್ನೇ ಸುರಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


