ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ದೂರದ ನಗರಗಳನ್ನು ಸಂಪರ್ಕಿಸಲು ಭಾರತೀಯ ರೈಲ್ವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಸೇವೆಯನ್ನು ಘೋಷಣೆ ಮಾಡಿದೆ. ಈ ರೈಲುಗಳ ಪ್ರಾಯೋಗಿಕ ಪರೀಕ್ಷೆ ಸಹ ಪೂರ್ಣಗೊಂಡಿತ್ತು. ಆದರೆ ಈಗ ರೈಲುಗಳ ಸಂಚಾರ ಇನ್ನಷ್ಟು ವಿಳಂಬವಾಗಲಿದೆ.
ಹೌದು, ಬೆಂಗಳೂರಿನ ಬಿಇಎಂಎಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಬೋಗಿಗಳನ್ನು ವಿನ್ಯಾಸಗೊಳಿಸಿತ್ತು. ಆದರೆ ಈಗ ಬಿಇಎಂಎಲ್ ತಯಾರು ಮಾಡಿದ ಎರಡು ಬೋಗಿಯನ್ನು ರಿಪೇರಿ ಕೆಲಸಕ್ಕೆ ವಾಪಸ್ ಕಳಿಸಲಾಗಿದೆ. ಆದ್ದರಿಂದ ಸ್ಲೀಪರ್ ರೈಲುಗಳ ಸಂಚಾರ ಇನ್ನಷ್ಟು ತಡವಾಗಲಿದೆ.
ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಜನವರಿಯಲ್ಲಿ ಪ್ರಾಯೋಗಿಕ ಸಂಚಾರವನ್ನು ಪೂರ್ಣಗೊಳಿಸಿತ್ತು. ಈ ರೈಲು ಬೆಂಗಳೂರು ಘಟಕಕ್ಕೆ ಈಗಾಗಲೇ ಆಗಮಿಸಿದೆ. 2ನೇ ವಂದೇ ಭಾರತ್ ರೈಲು ಬೋಗಿ ಕಳೆದ ವಾರ ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಾಗುವ ಪರೀಕ್ಷೆಗೆ ಒಳಪಟ್ಟಿತ್ತು. ಈ ರೈಲು ಸಹ ಈಗ ಬೆಂಗಳೂರಿಗೆ ಆಗಮಿಸುತ್ತಿದೆ.
ಡಿಸೆಂಬರ್ 2024ರ ಗಡುವು: ಈ ಮೊದಲು ಕೇಂದ್ರ ಸರ್ಕಾರ ವಂದೇ ಭಾರತ್ ಸ್ಲೀಪರ್ ರೈಲು 2024ರ ಡಿಸೆಂಬರ್‌ನಲ್ಲಿ ಸಂಚಾರ ನಡೆಸಲಿದೆ ಎಂದು ಗಡುವು ನೀಡಿತ್ತು. ಆದರೆ ಆ ಬಳಿಕ ಹಲವು ಗಡುವು ನೀಡಲಾಯಿತು. ಈಗ ಬಾಕಿ, ರಿಪೇರಿ ಕೆಲಸದ ಹಿನ್ನಲೆಯಲ್ಲಿ ಎರಡು ರೈಲು ಬೆಂಗಳೂರಿಗೆ ಬಂದಿದೆ.
ಐಎಫ್‌ಸಿ ಚೆನ್ನೈ ಬಿಇಎಂಎಲ್ ತಯಾರು ಮಾಡಿದ ಬೋಗಿಯ ಕೆಲವು ನ್ಯೂನ್ಯತೆಗಳನ್ನು ಪಟ್ಟಿ ಮಾಡಿತ್ತು. 2025ರ ಆಗಸ್ಟ್‌ನಲ್ಲಿ ವರದಿ ಸಲ್ಲಿಕೆ ಮಾಡಿತ್ತು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಿಇಎಂಎಲ್ ತಯಾರು ಮಾಡಿದ ಬೋಗಿಗಳಿಗೆ ಒಪ್ಪಿಗೆ ಸಿಕ್ಕಿದ್ದರೂ ಸಹ ಇನ್ನೂ ಸಹ ರಿಪೇರಿ ಕೆಲಸಗಳ ಕಾರಣಕ್ಕೆ ರೈಲು ವಾಣಿಜ್ಯ ಸೇವೆ ಮುಕ್ತವಾಗಿಲ್ಲ.
ರೈಲು ಬೋಗಿಯ ಆಂತರಿಕ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಿದೆ. ಇದಕ್ಕೆ ಪ್ರತಿ ರೈಲಿಗೆ ಸುಮಾರು 15 ದಿನ ಬೇಕು ಎಂದು ಅಂದಾಜಿಸಲಾಗಿದೆ. ಎರಡೂ ರೈಲುಗಳ ವಿನ್ಯಾಸದ ವಿಚಾರದಲ್ಲಿ ಐಎಫ್‌ಸಿ ಎತ್ತಿರುವ ಆಕ್ಷೇಪಣೆಗಳನ್ನು ಸರಿಪಡಿಸಿದ ಬಳಿಕ ಅವುಗಳನ್ನು ವಾಪಸ್ ಕಳಿಸಲಾಗುತ್ತದೆ.
ಪ್ರಯಾಣಿಕರ ಅಲರಾಂ, ಶೌಚಾಲಯ ವ್ಯವಸ್ಥೆ ಸೇರಿದಂತೆ ಒಟ್ಟು 160 ವಿನ್ಯಾಸದ ಕುರಿತು ಐಎಫ್‌ಸಿ ಬದಲಾವಣೆಯನ್ನು ಕೇಳಿದೆ. ಗಂಟೆಗೆ 180 ಕಿ.ಮೀ.ವೇಗದಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರವನ್ನು ನಡೆಸಿ, ಬಳಿಕ ಈಶಾನ್ಯ ರೈಲ್ವೆ ಪ್ರಧಾನ ಡಿಪೋದಲ್ಲಿ ಪರಿಶೀಲನೆ ನಡೆಸಿದ ಬಳಿಕ 2 ರೈಲುಗಳನ್ನು ಬೆಂಗಳೂರಿಗೆ ಕಳಿಸಲಾಗುತ್ತಿದೆ.
2024ರ ಮಾರ್ಚ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ 6 ತಿಂಗಳಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಸಂಚಾರವನ್ನು ನಡೆಸಲಿದೆ ಎಂದು ಘೋಷಣೆ ಮಾಡಿದ್ದರು. ಸೆಪ್ಟೆಂಬರ್ 1, 2024ರಲ್ಲಿ ಮಾದರಿ ರೈಲು ಬೋಗಿಯನ್ನು ಅವರು ಅನಾವರಣ ಮಾಡಿದ್ದರು.
ಮೇ 2023ರಲ್ಲಿ ಬಿಇಎಂಎಲ್‌ಗೆ ಐಎಫ್‌ಸಿ 16 ಬೋಗಿಗಳ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೋಗಿ ತಯಾರು ಮಾಡುವ ಟೆಂಡರ್ ನೀಡಿತ್ತು. ಗಂಟೆಗೆ 160 ಕಿ.ಮೀ. ವೇಗದಲ್ಲಿ ಓಡುವ (ಪ್ರಾಯೋಗಿಕ ಸಂಚಾರದಲ್ಲಿ 180 ಕಿ.ಮೀ.) ವೇಗದಲ್ಲಿ ಸಾಗುವ ಬೋಗಿಯನ್ನು ಬೆಂಗಳೂರಿನಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ.
ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಗಂಟೆಗೆ 180 ಕಿ.ಮೀ. ವೇಗದಲ್ಲಿ ಓಡಿಸಿ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿದೆ. ರೈಲು ವೇಗವಾಗಿ ಸಾಗುವಾಗ ಪ್ರಯಾಣಿಕರ ಸುರಕ್ಷತೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಆದ್ದರಿಂದ ಸರಿಯಾದ ಕ್ವಾಲಿಟಿ ಚೆಕ್ ಬಳಿಕ ರೈಲು ಸಂಚಾರದ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


