ಬೆಂಗಳೂರು ನಗರದಲ್ಲಿ ನವೆಂಬರ್ 19ರ ಹಾಡಹಗಲೇ ನಡೆದಿದ್ದ ಎಟಿಎಂಗೆ ಹಣ ತುಂಬುವ ವಾಹನದ ದರೋಡೆ ಕೇಸ್‌ನಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇದುವರೆಗೂ 6.29 ಕೋಟಿ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಕೆಲವರು ಪ್ರಕರಣದಲ್ಲಿ ಭಾಗಿಯಾದ ಶಂಕೆ ಇದ್ದು, ತನಿಖೆ ಮುಂದುವರೆದಿದೆ.
ದರೋಡೆಯಾದ 7.11 ಕೋಟಿ ರೂ. ಪೈಕಿ ಬೆಂಗಳೂರು ನಗರದ ಹೊರವಲಯದ ಪಾಳು ಬಿದ್ದ ಮನೆಯಲ್ಲಿ 5 ಕೋಟಿ ರೂ.ಗೂ ಅಧಿಕ ಹಣ ಪತ್ತೆಯಾಗಿತ್ತು. ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಶನಿವಾರ ಸಂಜೆ ಮತ್ತೊಬ್ಬ ಮತ್ತೊಬ್ಬ ಆರೋಪಿ ಬಂಧಿಸಿ ಆತನ ಬಳಿಕ ಇದ್ದ 70 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪ್ರಕರಣದ ಮಾಸ್ಟರ್ ಮೈಂಡ್, ಗೋವಿಂದರಾಜನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಅಣ್ಣಪ್ಪ ನಾಯಕ್‌ನನ್ನು ಸೇವೆಯಿಂದ ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ.
ಠಾಣೆಗೆ ಬಂದು ಶರಣಾದ ಆರೋಪಿ: ದರೋಡೆ ಪ್ರಕರಣದಲ್ಲಿ ಕಮ್ಮನಹಳ್ಳಿಯ ರವಿ ಮತ್ತು ಆತನ ಸಹೋದರ ರಾಕೇಶ್ ಆರೋಪಿಗಳು. ಪೊಲೀಸರು ರವಿಯನ್ನು ಬಂಧಿಸಿದ್ದರು. ಆದರೆ ಚಿತ್ತೂರಿನ ಕಡೆ ತೆರಳಿದ್ದ ರಾಕೇಶ್ ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈಗ ಪ್ರಕರಣದ ಸಂಬಂಧ ಬಂಧಿತ ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಶನಿವಾರ ಮಧ್ಯಾಹ್ನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ 3 ಆರೋಪಿಗಳನ್ನು ಬಂಧಿಸಲಾಗಿದೆ. 30 ಜನರನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. 8ಕ್ಕೂ ಅಧಿಕ ಆರೋಪಿಗಳು ಕೃತ್ಯದಲ್ಲಿ ಭಾಗಿಯಾದ ಶಂಕೆ ಇದೆ ಎಂದು ಹೇಳಿದ್ದರು.
ಚಿತ್ತೂರಿನಲ್ಲಿ ಕಾರು ನಿಲ್ಲಿಸಿ ಟ್ರಂಕ್‌ನಲ್ಲಿದ್ದ ಹಣವನ್ನು ಬ್ಯಾಗ್‌ಗೆ ಹಾಕಿಕೊಂಡು ಆರೋಪಿಗಳು ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಎಂದು ಸುತ್ತಾಡುತ್ತಿದ್ದರು. ಮೂರು ರಾಜ್ಯಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಆರೋಪಿಗಳನ್ನು ಹುಡುಕಿ ಬಂಧಿಸಿದೆ.
ಕೆಟಿಎಂ ಬೈಕ್ ಖರೀದಿ: ದರೋಡೆ ಪ್ರಕರಣದ ಆರೋಪಿ ಜಿತೇಶ್ ಮೂರು ದಿನದ ಹಿಂದೆ ಹೊಸ ಕೆಟಿಎಂ ಬೈಕ್ ಖರೀದಿ ಮಾಡಿದ್ದಾನೆ. ದರೋಡೆ ಪ್ರಕರಣದ ಹಣದಲ್ಲಿಯೇ ಬೈಕ್ ಖರೀದಿ ಮಾಡಿರುವ ಸಾಧ್ಯತೆ ಇದ್ದು, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದ್ಯ ಜಿತೇಶ್ ಬಳಿ ಯಾವುದೇ ಹಣ ಪತ್ತೆಯಾಗಿಲ್ಲ.
ಪೊಲೀಸರು ರವಿಯನ್ನು ಹೈದರಾಬಾದ್‌ನಲ್ಲಿ ಬಂಧಿಸಿದ್ದರು. ರವಿ, ರಾಕೇಶ್, ಜಿತೇಶ್ ಇವರಿಗೆಲ್ಲ ಅಣ್ಣಪ್ಪ ನಾಯಕ್ ಮತ್ತು ಸಿಎಂಎಸ್ ಸಂಸ್ಥೆಯ ಮಾಜಿ ಉದ್ಯೋಗಿ ಕ್ಸೇವಿಯರ್ ಜೊತೆ ಸ್ನೇಹವಿತ್ತು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಓಡಾಡುತ್ತಿದ್ದ ಸಹೋದರರಿಗೆ ದರೋಡೆ ಮಾಡುವ ಕುರಿತು ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ಐಡಿಯಾ ಕೊಟ್ಟಿದ್ದ.
ದರೋಡೆಗೆ ಬಳಕೆ ಮಾಡಿದ್ದ ಇನ್ನೋವಾ ಕಾರು ಬಾಣಸವಾಡಿ ಸಮೀಪದ ವೃದ್ಧ ದಂಪತಿಗೆ ಸೇರಿದ್ದು ಅಣ್ಣಪ್ಪ ನಾಯಕ್‌ಗೆ ವೃದ್ಧ ದಂಪತಿಗಳ ಪರಿಚಯವಿತ್ತು. ಊರಿಗೆ ಹೋಗಲು ಕಾರು ಬೇಕು ಎಂದು ಬಾಡಿಗೆಗೆ ಪಡೆದಿದ್ದ ಆತ, ಅದಕ್ಕೆ ಆರ್‌ಬಿಐ ಸ್ಟಿಕ್ಕರ್, ನಕಲಿ ನಂಬರ್ ಪ್ಲೇಟ್ ಅಂಟಿಸಿ ದರೋಡಗೆ ಬಳಕೆ ಮಾಡಿಕೊಂಡಿದ್ದ.
ಶನಿವಾರ ರಾತ್ರಿ ರಾಕೇಶ್ ಬಂದು ಶರಣಾದ ಬಳಿಕ ಆತನನ್ನು ಬಂಧಿಸಲಾಗಿದೆ. ಭಾನುವಾರ ಜಿತೇಶ್ ಬಂಧಿಸಲಾಗಿದೆ. ಚಿತ್ತೂರು ಜಿಲ್ಲೆಯ ಕುಪ್ಪಂ ಸಮೀಪದ ತಮ್ಮ ತೋಟದ ಮನೆಯಲ್ಲಿ ರವಿ, ರಾಕೇಶ್ ಬಚ್ಚಿಟ್ಟಿದ್ದ ಅಷ್ಟು ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಕೆಲವು ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು, ತನಿಖೆ ನಡೆಯುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


