ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಮೂಲಕ ನಟಿಸುವ ಅವಕಾಶ ಗಿಟ್ಟಿಸಿಕೊಂಡು ಮೊದಲ ಚಿತ್ರದಲ್ಲೇ ರಾಜ್ಯದಲ್ಲಿ ದೊಡ್ಡ ಹೆಸರು ಮಾಡಿ ಬಳಿಕ ಬಹು ಬೇಗನೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಅವಕಾಶ ಪಡೆದು ಸ್ಟಾರ್ ಪಟ್ಟ ಅಲಂಕರಿಸಿದ ನಟಿ.
ಟ್ರೋಲ್‌ಗಳೆಷ್ಟೇ ಇರಲಿ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತನ್ನ ಕೆಲಸ ತನ್ನ ಕೈಹಿಡಿಯಲಿದೆ ಎನ್ನುವ ಮನೋಭಾವದಿಂದ ದುಡಿದ ರಶ್ಮಿಕಾ ಇಂದು ಹಿಂದಿಯಲ್ಲಿಯೂ ಸಹ ಸದ್ದು ಮಾಡುತ್ತಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿಯೂ ಖ್ಯಾತಿಯನ್ನು ಪಡೆದಿರುವ ರಶ್ಮಿಕಾ ತೆಲುಗಿನ ಗರ್ಲ್‌ಫ್ರೆಂಡ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರದ ಪ್ರಚಾರದ ಸಂದರ್ಶನವೊಂದರಲ್ಲಿ ಚಿತ್ರರಂಗದ ಕೆಲಸದ ವೈಖರಿ ಬಗ್ಗೆ ಮುಕ್ತಳಾಗಿ ಮಾತನಾಡಿರುವ ರಶ್ಮಿಕಾ ಕಚೇರಿಗಳ ಹಾಗೆ ಚಿತ್ರರಂಗಕ್ಕೂ ಸಹ ಶಿಫ್ಟ್ ಮಾದರಿ ತರಬೇಕಾದ ಅಗತ್ಯವಿದೆ ಎಂದಿದ್ದಾರೆ.
ಯಾರೂ ಸಹ ಸಮಯ ಮೀರಿ ಕೆಲಸ ಮಾಡಬೇಡಿ ಅದರಿಂದ ಮುಂದಿನ ದಿನಗಳಲ್ಲಿ ಕಷ್ಟವಾಗಬಹುದು ಎಂದಿರುವ ರಶ್ಮಿಕಾ ಕಲಾವಿದರು ಮಾತ್ರವಲ್ಲ ಲೈಟ್‌ಬಾಯ್, ತಂತ್ರಜ್ಞರಿಗೂ ಸಹ ಸಮಯದ ಮಿತಿ ಇಲ್ಲದೇ ಕೆಲಸ ಇರಲಿದೆ ಎಂದಿದ್ದಾರೆ. ಎಷ್ಟೋ ಸಲ ನಿದ್ರೆಯಿಲ್ಲದೇ ಕೆಲಸ ಮಾಡಿದ್ದುಂಟು ಎಂದಿರುವ ರಶ್ಮಿಕಾ ಸಾಮಾನ್ಯ ಕಚೇರಿಗಳಂತೆ ಚಿತ್ರರಂಗಕ್ಕೂ ಸಹ 8 ಗಂಟೆ ಶಿಫ್ಟ್ ಬೇಕಿದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.
ಇನ್ನು ನಟಿ ರಶ್ಮಿಕಾ ಮಂದಣ್ಣ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಚೇರಿ ಮಾದರಿಯ ಶಿಫ್ಟ್ ಕೇಳುವ ನೀವು ಪಡೆಯುವ ಸಂಭಾವನೆಯಲ್ಲಿ ಕಡಿಮೆ ಕೊಟ್ಟರೆ ಸ್ವೀಕರಿಸುತ್ತೀರಾ ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು 20ರಿಂದ 25ಸಾವಿರ ರೂಗೆ ದುಡಿಯುವ ಜನರ ಹಾಗೆ ಶಿಫ್ಟ್ ಕೇಳುವ ನೀವು ಅವರಷ್ಟೇ ಸಂಬಳ ಪಡೆಯಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಇಷ್ಟು ಕಷ್ಟಪಟ್ಟು ಕೆಲಸವನ್ನು ಮೈಮೇಲೆ ಯಾಕೆ ಎಳೆದುಕೊಳ್ತೀರ ಕಡಿಮೆ ಸಿನಿಮಾಗಳನ್ನು ಒಪ್ಪಿಕೊಂಡರೆ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಅಲ್ಲವೇ ಎಂದೂ ಸಹ ಸಲಹೆ ನೀಡಿದ್ದಾರೆ. ಒಂದು ಸಿನಿಮಾದ ಶೂಟಿಂಗ್ ಮುಕ್ತಾಯವಾದ ಬಳಿಕ ನಿಮಗೆ ವಿಶ್ರಾಂತಿಗೆಂದು ಸಮಯ ಸಿಗುತ್ತದೆ. ಅಲ್ಲದೇ ಇಂತಿಷ್ಟು ದಿನಗಳ ಕಾಲ ಚಿತ್ರೀಕರಣ ಎಂದು ಸಮಯ ನಿಗದಿಯಾಗಿರುತ್ತದೆ, ಬಿಡುವಿನ ಸಮಯದಲ್ಲಿ ವಿದೇಶಿ ಪ್ರಯಾಣ ಬೆಳೆಸುವ ತಮ್ಮ ಬಾಯಲ್ಲಿ ಇದೆಂಥ ಮಾತು ಎಂದು ನೆಟ್ಟಿಗರು ಕಿಚಾಯಿಸಿದ್ದಾರೆ.
ಸ್ಟಾರ್‌ಗಳನ್ನು ಹೊರತುಪಡಿಸಿ ತಂತ್ರಜ್ಞರಿಗೆ ಬೇಕಿದ್ದರೆ ಈ ನಿಯಮವನ್ನು ಅಳವಡಿಸಿಕೊಳ್ಳಬಹುದು. ಮೇಲಿನ ಸವಲುತ್ತುಗಳನ್ನು ಹೊಂದಿರುವ ತಮಗೇಕೆ ಶಿಫ್ಟ್ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


