ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಪೊಲೀಸರು ಅಡ್ಡಿ ಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಫ್ರೀಡಂಪಾರ್ಕ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ರಾಜ್ಯ ಸರ್ಕಾರ ಅಟ್ಟಹಾಸ ಮೆರೆದಿದ್ದು, ಪೊಲೀಸರ ಮೂಲಕ ಟೆಂಟ್ ಕಿತ್ತುಹಾಕಿಸಿ ಬಲವಂತವಾಗಿ ಪ್ರತಿಭಟನೆ ಅಂತ್ಯಗೊಳಿಸುವ ಮೂಲಕ ಹಿಟ್ಲರ್ ಧೋರಣೆ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ಚುನಾವಣೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟ ಆಶ್ವಾಸನೆ ಈಡೇರಿಸುವುದಕ್ಕಂತೂ ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಕೊರೆಯುವ ಚಳಿಯನ್ನೂ ಲೆಕ್ಕಿಸದೇ ನಾಲ್ಕು ದಿನದಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರ ಬಳಿ ಹೋಗ ಕನಿಷ್ಠ ಪಕ್ಷ ಅವರನ್ನು ಸಮಾಧಾನ ಮಾಡುವ ಸೌಜನ್ಯವೂ ನಿಮ್ಮ ಸರ್ಕಾರಕ್ಕೆ ಇಲ್ಲ. ಈಗ ಅವರ ಶಾಂತಿಯುವ ಪ್ರತಿಭಟನೆಗೂ ಅಡ್ಡಿಪಡಿಸುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಹಿಟ್ಲರ್ ಧೋರಣೆ ಜಾಸ್ತಿ ದಿನ ನಡೆಯಲ್ಲ. ನಿಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಕನ್ನಡಿಗರು ತಿರುಗಿ ಬೀಳುವ ದಿನ ಬಹಳ ದೂರವಿಲ್ಲ ಎಂದು ಲೇವಡಿ ಮಾಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


