ಮೈಸೂರು: ಇಲ್ಲಿನ ಕೆಎಸ್ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಪಂಜಾಬ್ ದ ಶೇರ್ ಹಾಗೂ ಬೆಂಗಾಲ್ ಟೈಗರ್ಸ್ ನಡುವೆ ನಡೆದಿದ್ದು ಹಾಲಿ ಚಾಂಪಿಯನ್ಸ್ ಬೆಂಗಾಲ್ ಟೈಗರ್ಸ್ ವಿರುದ್ಧ 8 ವಿಕೆಟ್ಗಳ ಜಯ ದಾಖಲಿಸಿದ ಪಂಜಾಬ್ ದೆ ಶೇರ್ ಫೈನಲ್ ತಲುಪಿದೆ.
ಇನ್ನು ಎರಡನೇ ಸೆಮಿಫೈನಲ್ ಪಂದ್ಯ ಇದೇ ಕ್ರೀಡಾಂಗಣದಲ್ಲಿ ಸಂಜೆ 6.30ಕ್ಕೆ ಆರಂಭವಾಗಿದ್ದು, ಈ ಪಂದ್ಯದಲ್ಲಿ ಬದ್ಧ ವೈರಿಗಳಾದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ತಂಡಗಳು ಮುಖಾಮುಖಿಯಾಗಿವೆ.
ಟಾಸ್ ಗೆದ್ದ ಚೆನ್ನೈ ರೈನೋಸ್ ಬೌಲಿಂಗ್ ಆರಿಸಿಕೊಂಡಿದ್ದು ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಅದರಂತೆ ಕರ್ನಾಟಕ ಬುಲ್ಡೋಜರ್ಸ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 10 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 111 ರನ್ ಕಲೆಹಾಕಿದೆ. ಅತ್ತ ಸಮಾಧಾನಕರ ಬೌಲಿಂಗ್ ಮಾಡಿರುವ ಚೆನ್ನೈ ರೈನೋಸ್ ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕಿಂತ ಹೆಚ್ಚು ರನ್ ಕಲೆಹಾಕಿ ಮುನ್ನಡೆ ಸಾಧಿಸಲಿದೆಯಾ ಕಾದು ನೋಡಬೇಕಿದೆ.
ಕರ್ನಾಟಕ ಬುಲ್ಡೋಜರ್ಸ್ ಪರ ಆರಂಭಿಕರಾಗಿ ಸ್ಪೋಟಕ ಆಟಗಾರರಾದ ಡಾರ್ಲಿಂಗ್ ಕೃಷ್ಣ ಹಾಗೂ ರಾಜೀವ್ ಹನು ಕಣಕ್ಕಿಳಿದರು. ಕೃಷ್ಣ 25 ರನ್ ಗಳಿಸಿ ಔಟ್ ಆದರೆ, ರಾಜೀವ್ ಹನು 28 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 53 ರನ್ ಬಾರಿಸಿದರು. ಇನ್ನುಳಿದಂತೆ ಚಂದನ್ ಕುಮಾರ್ 3, ಬಚ್ಚನ್ 6, ಕರಣ್ ಆರ್ಯನ್ 4 ರನ್ ಮತ್ತು ಕಾರ್ತಿಕ್ ಜಯರಾಮ್ ಅಜೇಯ 15 ರನ್ ಬಾರಿಸಿದರು. ಹೀಗೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ರಾಜೀವ್ ಹನು ಹೊರತುಪಡಿಸಿ ಉಳಿದ ಆಟಗಾರರು ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಕಳೆದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಕೃಷ್ಣ ಈ ಇನ್ನಿಂಗ್ಸ್ನಲ್ಲಿ ತಮ್ಮ ವೇಗದ ಆಟವನ್ನಾಡಲಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


