ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಇಂದು ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನಡೆಯಲಿರುವ ಪಂದ್ಯ ಮತ್ತು ನಾಳೆ (ಮಾರ್ಚ್ 2) ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯಗಳು ಸೆಮಿಫೈನಲ್‌ನಲ್ಲಿ ಯಾವ ತಂಡಗಳು ಕಣಕ್ಕಿಳಿಯಲಿವೆ ಎಂಬ ಸ್ಪಷ್ಟತೆಯನ್ನು ನೀಡಲಿವೆ.
ಇನ್ನು ಎ ಗುಂಪಿನಲ್ಲಿರುವ ಭಾರತ ತಂಡಕ್ಕೆ ಬಿ ಗುಂಪಿನ ತಂವೊಂದು ಸೆಮಿಫೈನಲ್‌ನಲ್ಲಿ ಎದುರಾಳಿಯಾಗಲಿದ್ದು, ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ಈ ಎರಡು ತಂಡಗಳಲ್ಲಿ ಒಂದು ತಂಡ ಸೆಮಿಫೈನಲ್‌ನಲ್ಲಿ ಸೆಣಸಾಡಲಿದೆ.
ಅತ್ತ ನಿನ್ನೆ ನಡೆದ ಪಂದ್ಯ ಮಳೆಗೆ ರದ್ದಾದ ಬೆನ್ನಲ್ಲೇ ಆಸ್ಟ್ರೇಲಿಯಾ ಸೆಮಿಫೈನಲ್ ಅರ್ಹತೆ ಪಡೆದುಕೊಂಡಿದ್ದು, ಮತ್ತೊಮ್ಮೆ ಆಸ್ಟ್ರೇಲಿಯಾ ಹಾಗೂ ಭಾರತ ಐಸಿಸಿ ನಾಕ್‌ಔಟ್ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿವೆ. ಇನ್ನು ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕೆ ಸಿಂಹಸ್ವಪ್ನವಾಗಿ ಕಾಡಿರುವ ಟ್ರಾವಿಸ್ ಹೆಡ್ ಹೆಸರು ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಾಗಿನಿಂದ ಟ್ರೆಂಡಿಂಗ್‌ನಲ್ಲಿದೆ.
ಭಾರತ ನಾಕ್‌ಔಟ್ ಪಂದ್ಯಗಳಲ್ಲಿ ಸೋಲಲು ಟ್ರಾವಿಸ್ ಹೆಡ್ ಅವರ ಆಟ ಹಲವಾರು ಬಾರಿ ಕಾರಣವಾಗಿದ್ದು, ಈ ಕುರಿತು ಚರ್ಚೆಗಳು ನಡೆಯುತ್ತಿರುವ ಕಾರಣಕ್ಕೆ ಟ್ರಾವಿಸ್ ಹೆಡ್ ಹೆಸರು ಟ್ರೆಂಡಿಂಗ್‌ನಲ್ಲಿದೆ. ಈ ಕುರಿತು ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಸಹ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಟ್ರಾವಿಸ್ ಹೆಡ್ ಅವರನ್ನು ಆನೆಗೆ ಹೋಲಿಸಿ ಮೀಮ್ ಮಾಡಿದ್ದಾರೆ.
ಆನೆ ಹುಡುಗಿಯರ ಜೊತೆ ಸೌಮ್ಯವಾಗಿ ವರ್ತಿಸುವ ವಿಡಿಯೊ ಹಾಗೂ ಹುಡುಗರನ್ನು ಹಿಮ್ಮೆಟ್ಟಿಸುವ ವಿಡಿಯೊ ಎಡಿಟ್ ಹಂಚಿಕೊಂಡಿರುವ ಜಾಫರ್ ಕ್ರಮವಾಗಿ ಟ್ರಾವಿಸ್ ಹೆಡ್ ಬೇರೆ ತಂಡಗಳ ವಿರುದ್ಧ ಹೇಗೆ ಆಡುತ್ತಾರೆ ಹಾಗೂ ಭಾರತದ ವಿರುದ್ಧ ಹೇಗೆ ಆಡುತ್ತಾರೆ ಎಂದು ಟ್ರೋಲ್ ಮಾಡಿದ್ದಾರೆ. ಈ ಮೂಲಕ ಈ ಬಾರಿಯೂ ಟ್ರಾವಿಸ್ ಹೆಡ್ ತಲೆನೋವಿರಲಿದೆ ಎಂದು ಭಾರತ ತಂಡಕ್ಕೆ ಎಚ್ಚರಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


