ಬೆಂಗಳೂರು: ಸುಳ್ಳು ಸುದ್ದಿಗಳ ಮೇಲೆ ನಿಯಂತ್ರಣ, ಪಾವತಿ ಸುದ್ದಿಗಳಿಗೆ ಕಡಿವಾಣ ಸೇರಿದಂತೆ ಹಲವಾರು ವಿಚಾರಗಳಿಗೆ ಸಂಬಂಧಪಟ್ಟಂತೆ ಕಾನೂನು ರೂಪಿಸಲು ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಾರ್ವಜನಿಕ ಸಂಪರ್ಕ ಹಾಗೂ ವಾರ್ತಾ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಪ್ರಜಾಪ್ರಭುತ್ವವಾದಿಯಾಗಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇನೆ. ಆದರೆ ಊಹೆಯ ಪತ್ರಿಕೋದ್ಯಮ ಅಪಾಯಕಾರಿ ಎಂದರು.
ಇಂದಿನ ಪತ್ರಿಕಾ ದಿನಾಚರಣೆಯಲ್ಲಿ ನಿಜ ಸುದ್ದಿಗಾಗಿ ಸಮರ ಎಂಬ ವಿಚಾರಗೋಷ್ಠಿ ನಡೆದಿದೆ. ಅದರ ಅರ್ಥ ಪತ್ರಿಕೋದ್ಯಮದಲ್ಲಿ ಸುಳ್ಳು ಸುದ್ದಿ ಬಂದು ಸೇರಿಕೊಂಡಿದೆ ಎಂಬುದನ್ನು ಒಪ್ಪಿಕೊಂಡಂತಲ್ಲವೇ?, ಸುಳ್ಳು ಸುದ್ದಿ ಜಾಸ್ತಿಯಾಗಿವೆ ಎಂದು ಹೇಳಿದರು.
ಪತ್ರಿಕೋದ್ಯಮ ನಾಲ್ಕನೇ ಅಂಗವಿದ್ದಂತೆ. ಇದು ನಿರ್ಭೀತಿ ಮತ್ತು ನಿಸ್ಪಕ್ಷಪಾತವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಪಕ್ಷದ ಪರವಾಗಿ ಕೇಂದ್ರದಲ್ಲಿ ಆಡಳಿತದಲ್ಲಿರುವವರ ಬೆಂಬಲವಾಗಿ ಹೆಚ್ಚಿನ ಓಲೈಕೆಗಳು ಕಂಡುಬರುತ್ತಿವೆ. ಪ್ರಧಾನಿಯಾಗಲೀ, ಮುಖ್ಯಮಂತ್ರಿಯಾಗಲೀ ಯಾರ ಪರವಾಗಿಯೂ ಪತ್ರಿಕೋದ್ಯಮ ನಿಲ್ಲಬಾರದು. ದಲಿತರು, ದಮನಿತರ ಪರವಾದ ನೈಜತೆಗಳನ್ನು ಮುಚ್ಚಿಡದೆ ವಾಸ್ತವಾಂಶಗಳನ್ನು ಜನರ ಮುಂದಿಡಬೇಕು ಎಂದರು.
ಇತ್ತೀಚೆಗೆ ನಡೆದ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮೇಳನದಲ್ಲಿ ತಾವು ಸ್ಪಷ್ಟ ಸೂಚನೆ ನೀಡಿದ್ದು, ಸುಳ್ಳು ಸುದ್ದಿ ಮತ್ತು ದ್ವೇಷಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದೇನೆ ಎಂದರು.
ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರ ವಾಕಿಟಾಕಿ ಸದ್ದು ಮಾಡಿದಾಗ ಏಯ್, ಮೊದಲು ಅದನ್ನು ಬಂದ್ ಮಾಡಯ್ಯ ಎಂದು ಮುಖ್ಯಮಂತ್ರಿ ಹೇಳಿದರು.
ನಾವಿಲ್ಲಿ ಗಂಭೀರ ಚರ್ಚೆ ಮಾಡುತ್ತಿದ್ದೇವೆ. ಈ ರೀತಿಯ ಸದ್ದು ಅಡಚಣೆ ಮಾಡುತ್ತದೆ. ವಾಕಿಟಾಕಿಯ ಸೂಚನೆಗಳು ಬೇಕು. ಆದರೆ ಸದ್ದಾಗಬಾರದು ಎಂದು ಮುಖ್ಯಮಂತ್ರಿ ಹೇಳಿದಾಗ ಕಾರ್ಯಕ್ರಮದಲ್ಲಿ ನಗೆಯ ಅಲೆಯುಕ್ಕಿತು.
ನಾನು ಒಂದು ಪಕ್ಷದ ರಾಜಕಾರಣಿಯಾಗಿರಬಹುದು. ಆದರೆ ನಾನು ಹೇಳುವ ಅಂಶಗಳಲ್ಲಿರುವ ಜನ ಸ್ಪಂದನೆಯ ನಿಲುವುಗಳನ್ನು ಅಲ್ಲಗಳೆಯಬಾರದು ಎಂದು ಅವರು ಹೇಳಿದರು.
ಊಹೆಯ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ. ಪತ್ರಕರ್ತರು ತನಿಖೆ ಮಾಡಬೇಕು. ಆಗ ಸತ್ಯ ಗೊತ್ತಾಗುತ್ತದೆ. ಒಂದು ವೇಳೆ ಗೊತ್ತಾಗದೇ ಇದ್ದರೂ ಕನಿಷ್ಠ ಗಂಭೀರ ಪ್ರಯತ್ನ ನಡೆದಿರುವುದಾದರೂ ಗಮನಕ್ಕೆ ಬರುತ್ತದೆ. ಸತ್ಯ ಪತ್ತೆ ಹಚ್ಚುವ ಪ್ರಯತ್ನವನ್ನೇ ಮಾಡದೇ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದು ಸರಿಯಲ್ಲ. ಅದು ಸತ್ಯ ಅಲ್ಲ ಎಂದು ಗೊತ್ತಾಗುತ್ತಿದ್ದಂತೆ ಏಕಾಏಕಿ ಅದನ್ನು ಬದಲಾವಣೆ ಮಾಡಲಾಗುತ್ತದೆ. ಇದು ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಜಾಗತಿಕವಾಗಿ 180 ರಾಷ್ಟ್ರಗಳಲ್ಲಿ ಭಾರತ ಪತ್ರಿಕಾ ಸ್ವಾತಂತ್ರ್ಯದಲ್ಲಿ 150ನೇ ಸ್ಥಾನದಲ್ಲಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸುಳ್ಳು ಸುದ್ದಿಗಳನ್ನು ಹತ್ತಿಕ್ಕಿ ನಿಜವಾದ ಸುದ್ದಿ ಸಮರ ಮುಂದುವರೆಯಬೇಕು ಎಂದು ಆಶಿಸಿದರು.
ವಾಯು ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರದ ಕಠಿಣ ಕ್ರಮ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


