ಬೆಂಗಳೂರು: ಧರ್ಮಸ್ಥಳ ಪ್ರದೇಶದಲ್ಲಿನ ಅಸಹಜ ಸಾವುಗಳ ತನಿಖೆ ನಡೆಸುತ್ತಿರುವ ಎಸ್‍ಐಟಿ ತಂಡದ ಡಿಜಿಪಿ ಪ್ರಣವ್ ಮೊಹಾಂತಿ ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಸಾಧ್ಯತೆಗಳಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಸೇವಾ ಹಿರಿತನ ಹಾಗೂ ಜೇಷ್ಠತೆಯ ಆಧಾರದ ಮೇಲೆ ಕೇಂದ್ರ ಸೇವೆಗೆ ನಿಯೋಜನೆಗೊಳ್ಳಬಹುದಾದ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಗೊಳಿಸಿವೆ.
ಈ ರೀತಿ ಎಂಪ್ಯಾನಲ್ ಸಿದ್ಧಪಡಿಸಿದಾಕ್ಷಣ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಬಿಟ್ಟುಕೊಡುತ್ತೇವೆ ಎಂಬ ಅಭಿಪ್ರಾಯ ಸರಿಯಲ್ಲ. ಕೇಂದ್ರ ಸರ್ಕಾರ ರಚಿಸಿರುವ ಎಂಪ್ಯಾನಲ್‍ನಲ್ಲಿ ಪ್ರಣವ್ ಮೊಹಾಂತಿ ಹೆಸರಿರುವುದು ಹೆಚ್ಚುಗಾರಿಕೆಯ ವಿಷಯ. ಆದರೆ ಅವರನ್ನು ವರ್ಗಾವಣೆ ಮಾಡುವ ಮುನ್ನ ಕೇಂದ್ರಸರ್ಕಾರ ರಾಜ್ಯಕ್ಕೆ ಪತ್ರ ಬರೆಯಬೇಕು, ಅದನ್ನು ನಾವು ಪರಿಗಣಿಸಿ ರಾಜ್ಯ ಸೇವೆಯಿಂದ ಬಿಡುಗಡೆ ಮಾಡಬೇಕು. ಈ ಹಂತದಲ್ಲಿ ಅದ್ಯಾವುದೂ ಆಗಿಲ್ಲ. ಕೇಂದ್ರ ಸರ್ಕಾರ ಎಂಪ್ಯಾನಲ್ ರಚಿಸುತ್ತಿದ್ದಂತೆ ಇಲ್ಲದ-ಸಲ್ಲದ ವದಂತಿಗಳನ್ನು ಹರಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಧರ್ಮಸ್ಥಳದ ವಿಚಾರವಾಗಿ ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ನಾವು ಹೇಳಿಕೆ ನೀಡುವುದಿಲ್ಲ. ಎಸ್‍ಐಟಿ ಅಧಿಕಾರಿಗಳು ಮೊದಲು ತಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿ. ಈ ನಡುವೆ ಇಲ್ಲಸಲ್ಲದ ವದಂತಿಗಳನ್ನು ಹರಡುತ್ತಿರುವ ಬಗ್ಗೆ ನಾವು ನಿಗಾ ಇರಿಸಿದ್ದೇವೆ. ಈ ಮೊದಲು ಕರಾವಳಿ ಭಾಗದಲ್ಲಿ ಕೋಮು-ಗಲಭೆಗಳಾಗುತ್ತಿದ್ದವು. ನಮ ಸರ್ಕಾರ ಅದಕ್ಕೆ ಕಡಿವಾಣ ಹಾಕಿದೆ. ಧರ್ಮಸ್ಥಳದ ವಿಚಾರವಾಗಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬಂದು ಚುನಾವಣಾ ಅಕ್ರಮಗಳ ಬಗ್ಗೆ ಪ್ರತಿಭಟನೆ ಮಾಡಲು ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ನಿಯಮಾನುಸಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಒಳಮೀಸಲಾತಿ ವಿಚಾರವಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು ರಾಜ್ಯಸರ್ಕಾರ ತನ್ನ ಮಾತಿನಂತೆ ಹೊಸ ಮೀಸಲಾತಿ ಜಾರಿಗೆ ಕ್ರಮಕೈಗೊಂಡಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ತನ್ನ ವರದಿಯನ್ನು ನೀಡಲಿದೆ. ಇದನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಣ್ಣಪುಟ್ಟ ಅಸಮಾಧಾನಗಳನ್ನು ಬಗೆಹರಿಸಲು ನಾಳೆ ಆಡಳಿತ ಪಕ್ಷದ ಶಾಸಕರ ಜೊತೆ ಸಮಾಲೋಚನೆ ನಡೆಸುವುದಾಗಿ ಹೇಳಿದರು.
ಬಿಎಸ್ಎನ್ಎಲ್ ರೂ.1 ಪ್ಲಾನ್: ಕೇವಲ ₹1ಕ್ಕೆ ಆಜಾದಿ ಕಾ ಪ್ಲಾನ್ ನಂಬಲಾಗದ ಕೊಡುಗೆಗಳೊಂದಿಗೆ ಲಭ್ಯ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


