ಬೆಂಗಳೂರು: ಮೈಸೂರು ಚಲೋ, ಧರ್ಮಸ್ಥಳ ಚಲೋ ಮೂಲಕ ಬಿಜೆಪಿ ರಾಜ್ಯದ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹುನ್ನಾರ ನಡೆಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಮ್ಮ ಕುರ್ಚಿ ಉಳಿಸಿಕೊಳ್ಳಲು ಧರ್ಮಸ್ಥಳ ಹಾಗೂ ಮೈಸೂರು ಚಲೋ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಧರ್ಮಸ್ಥಳದ ವಿಚಾರವಾಗಿ ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಹಿರಂಗ ಭಾಷಣ ಮಾಡಿ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಎಲ್ಲವೂ ಗೊತ್ತಿದೆ. ಅವರು ಧೈರ್ಯವಾಗಿ ಸತ್ಯ ಹೇಳಬೇಕು. ಕೇಂದ್ರ ಸರ್ಕಾರದಿಂದ ಅವರಿಗೆ ಅಗತ್ಯವಾದ ರಕ್ಷಣೆ ಒದಗಿಸಲಾಗುತ್ತದೆ ಎಂದಿದ್ದರು. ಆ ಸತ್ಯ ಏನು ಎಂದು ಈವರೆಗೂ ಬಾಯಿ ಬಿಟ್ಟಿಲ್ಲ ಎಂದರು.
ಈಗ ಚರ್ಚೆಯಲ್ಲಿರುವ ಗಿರೀಶ್ ಮಟ್ಟಣ್ಣನವರ್, ಮಹೇಶ್‍ಶೆಟ್ಟಿ ತಿಮರೋಡಿ ಬಿಜೆಪಿ ಮತ್ತು ಆರ್ ಎಸ್ ಎಸ್ ಮೂಲದವರಲ್ಲವೇ? ಮಟ್ಟಣ್ಣನವರ್ ಬಿಜೆಪಿ ಯುವ ಘಟಕದ ರಾಜ್ಯಾಧ್ಯಕ್ಷರಾಗಿರಲಿಲ್ಲವೇ? ಒಂದು ಕಾಲಕ್ಕೆ ಬಿಜೆಪಿ ಅವರನ್ನು ಯೂತ್ ಐಕಾನ್ ಎಂದು ಬಿಂಬಿಸಿರಲಿಲ್ಲವೇ? ಮಹೇಶ್ ಶೆಟ್ಟಿ ಆರ್ ಎಸ್ ಎಸ್ ಪ್ರಮುಖರಾಗಿರಲಿಲ್ಲವೇ? ಸಂಘ ಪರಿಹಾರಕ್ಕೆ ಗೊತ್ತಿಲ್ಲದೆ ಮಹೇಶ್ ಇದನ್ನೆಲ್ಲಾ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಈಗ ಎನ್ ಐ ಎ ತನಿಖೆಯಾಗಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ. ರಾಜ್ಯ ಸರ್ಕಾರದಿಂದ ಸಿಬಿಐ ತನಿಖೆಗೆ ವಹಿಸಿರುವ ಹಲವು ಪ್ರಕರಣಗಳು ತನಿಖೆಯಾಗದೆ ಬಾಕಿ ಉಳಿದಿವೆ. ನಮ್ಮಲ್ಲಿ ಸಂಪನ್ಮೂಲ ಹಾಗೂ ಸಿಬ್ಬಂದಿ ಇಲ್ಲ. ರಾಜ್ಯ ಸರ್ಕಾರವೇ ಸಿಬ್ಬಂದಿ, ತನಿಖಾಧಿಕಾರಿಗಳ ಸಂಚಾರಕ್ಕೆ ವಾಹನ ವ್ಯವಸ್ಥೆ ಹಾಗೂ ಕಚೇರಿಗೆ ಸ್ಥಳ ಒದಗಿಸಬೇಕು ಎಂದು ಕಳೆದ ವರ್ಷ ಸಿಬಿಐ ಪತ್ರ ಬರೆದಿದೆ. ನಮ್ಮ ಸಿಬ್ಬಂದಿ ಕೊಟ್ಟು, ಸಂಪನ್ಮೂಲ ಒದಗಿಸುವುದಾದರೆ ಸಿಬಿಐ ತನಿಖೆಯೇ ಏಕೆ ಬೇಕು ಎಂದು ಪ್ರಶ್ನಿಸಿದರು.
ಧರ್ಮಸ್ಥಳದ ವಿಚಾರದಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವಂತಹ ಅಂಶಗಳಿಲ್ಲ. ಹಾಗೂ ಒಂದು ವೇಳೆ ಎನ್ ಐ ಎ ತನಿಖೆಯಾಗಬೇಕು ಎಂದಾದರೆ ಸ್ವಯಂ ಪ್ರೇರಿತವಾಗಿ ಕೇಂದ್ರ ಸರ್ಕಾರವೇ ಪ್ರಕರಣವನ್ನು ಕೈಗೆತ್ತಿಕೊಳ್ಳಲಿ ಎಂದು ಹೇಳಿದರು.
ವಿರೋಧ ಪಕ್ಷಗಳಿಗೆ ಟೀಕೆ ಮಾಡಲು ಸೂಕ್ತ ವಿಷಯಗಳಿಲ್ಲದೆ ಬಿಜೆಪಿಯವರು ದಸರಾ ಉದ್ಘಾಟನೆಯಂತಹ ವಿಚಾರಗಳಲ್ಲೂ ವಿವಾದ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಮೈಸೂರು ದಸರಾ ಉದ್ಘಾಟನೆಗೆ ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂರನ್ನು ಆಹ್ವಾನಿಸಿತ್ತು. ಆ ಸಂದರ್ಭದಲ್ಲಿ ಕಲಾಂ ಅವರು ಬರಲಿಲ್ಲ ಎಂಬುದು ಬೇರೆ ಮಾತು. ಯಾವ ಆಧಾರದ ಮೇಲೆ ಕಲಾಂರನ್ನು ಆಹ್ವಾನಿಸಲಾಗಿತ್ತು. ಮುಸ್ಲಿಮರು ಎಂಬ ಕಾರಣಕ್ಕೆ ಆಹ್ವಾನಿಸಲಾಗಿತ್ತೆ ಅಥವಾ ಅವರು ದೊಡ್ಡ ಸಾಧಕರು ಎಂಬ ಕಾರಣಕ್ಕೆ ಕರೆಯಲಾಗಿತ್ತೇ ಎಂದು ಪ್ರಶ್ನಿಸಿದರು.
ಬಾನುಮುಷ್ತಾಕ್ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆ ಕಾರಣಕ್ಕೆ ನಮ್ಮ ಸರ್ಕಾರ ದಸರಾ ಉದ್ಘಾಟನೆಗೆ ಆಹ್ವಾನಿಸಿದೆ. ಬಿಜೆಪಿಯ ಒಬ್ಬರಾದರೂ ಬೂಕರ್ ಪ್ರಶಸ್ತಿ ಪಡೆದು ತೋರಿಸಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಕೋಮು ಸೌಹಾರ್ದ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಬಿಜೆಪಿಯವರು ಅದಕ್ಕೆ ಧಕ್ಕೆ ತರುತ್ತಿದ್ದಾರೆ. ಎಲ್ಲಾ ದೇವರನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದಾರೆ. ದಸರಾದಂತಹ ನಾಡಹಬ್ಬದಲ್ಲೂ ರಾಜಕೀಯ ಮಾಡುವುದು ಬಿಜೆಪಿಗೆ ಶೋಭೆ ತರುವುದಿಲ್ಲ ಎಂದರು.
ಮಾನವ ಹಕ್ಕು ಆಯೋಗದ ಅಧಿಕಾರಿಯೆಂದು ಸುಳ್ಳು ಹೇಳಿದ ಆರೋಪ; ಮಟ್ಟಣ್ಣವರ್ ವಿರುದ್ಧ ಪ್ರಕರಣ ದಾಖಲು
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


