ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಶಾಸಕರ ಪುತ್ರನಿಗೆ ‘ಶಿವಕುಮಾರ’ ಎಂದು ನಾಮಕರಣ ಮಾಡಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಈ ಶಿವಕುಮಾರ ಕರುನಾಡ ಬೆಳಗುವ ಕುವರನಾಗಲಿ ಎಂದು ಮನತುಂಬಿ ಹಾರೈಸುವೆ’ ಎಂದು ಹೇಳಿದ್ದಾರೆ.
ಕುಡಚಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣನವರ್ ಕುಟುಂಬದ ಜೊತೆ ಬೆಂಗಳೂರಿನ ಗೃಹ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮಗುವಿಗೆ ಶಿವಕುಮಾರ ಎಂದು ನಾಮಕರಣ ಮಾಡಲಾಗಿದೆ.
ಈ ಕುರಿತು ಪೋಸ್ಟ್ ಹಾಕಿರುವ ಡಿ.ಕೆ.ಶಿವಕುಮಾರ್, ‘ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ!
ನನ್ನ ಗೃಹಕಚೇರಿಯಲ್ಲಿಂದು ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರ ಮಗನಿಗೆ “ಶಿವಕುಮಾರ್” ಎಂದು ನಾಮಕರಣ ಮಾಡುವ ಭಾಗ್ಯ ನನ್ನದಾಯಿತು. ನನ್ನ ಹೆಸರನ್ನು ಮಗುವಿಗೆ ಇಡಲು ನಿರ್ಧರಿಸಿದ ಶಾಸಕರ ಈ ನಡೆಗೆ ನಾನು ಧನ್ಯ!’ ಎಂದು ಹೇಳಿದ್ದಾರೆ.
‘ಮುಂದಿನ ದಿನಗಳಲ್ಲಿ ಈ ಮುದ್ದಾದ ಮಗು ನನಗಿಂತಲೂ ಎತ್ತರಕ್ಕೆ ಬೆಳೆಯಲಿ, ತಂದೆ-ತಾಯಿಗಳಿಗೆ ಒಳ್ಳೆಯ ಹೆಸರು ತರುವಂತಾಗಲಿ ಎಂದು ಶುಭಹಾರೈಸಿದೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಈ “ಶಿವಕುಮಾರ” ಕರುನಾಡ ಬೆಳಗುವ ಕುವರನಾಗಲಿ ಎಂದು ಮನತುಂಬಿ ಹಾರೈಸುವೆ’ ಎಂದು ತಿಳಿಸಿದ್ದಾರೆ.
ಯಾರು ಮಹೇಂದ್ರ ತಮ್ಮಣ್ಣನವರ್?: ಬೆಳಗಾವಿ ಜಿಲ್ಲೆಯ ಕುಡಚಿ ಕ್ಷೇತ್ರದ ಕಾಂಗ್ರೆಸ್ ನಾಯಕ ಮಹೇಂದ್ರ ತಮ್ಮಣ್ಣನವರ್ 2023ರ ಚುನಾವಣೆಯಲ್ಲಿ 85,321 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಅವರು ಹಾಲಿ ಶಾಸಕರಾಗಿದ್ದ ಬಿಜೆಪಿಯ ಪಿ.ರಾಜೀವ (60,078 ಮತ) ಸೋಲಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ ಮಹೇಂದ್ರ ತಮ್ಮಣ್ಣನವರ್ ಕುಡಚಿ ಅಭ್ಯರ್ಥಿ ಎಂದು ಘೋಷಿಸಿತ್ತು. ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದ 12 ಅಭ್ಯರ್ಥಿಗಳಲ್ಲಿ ಮಹೇಂದ್ರ ತಮ್ಮಣ್ಣನವರ್ ಸಹ ಒಬ್ಬರಾಗಿದ್ದರು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪಕ್ಷದ ಅಭ್ಯರ್ಥಿ ಮಹೇಂದ್ರ ತಮ್ಮಣ್ಣನವರ್ ಪರವಾಗಿ ಪ್ರಚಾರವನ್ನು ಮಾಡಿದ್ದರು. ಮಹೇಂದ್ರ ತಮ್ಮಣ್ಣನವರ್ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದ್ದರು.
ಕುಡಚಿ ಬೆಳಗಾವಿ ಜಿಲ್ಲೆಯ ಮೀಸಲು ವಿಧಾನಸಾಭ ಕ್ಷೇತ್ರವಾಗಿದೆ. ಮೊದಲು ಕ್ಷೇತ್ರವನ್ನು ಕಾಂಗ್ರೆಸ್‌ನ ಘಾಟಗೆ ಶಮಾ ಭೀಮ ಪ್ರತಿನಿಧಿಸುತ್ತಿದ್ದರು. ಅವರು 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಂದ್ರ ಕೆ.ತಮ್ಮಣ್ಣವರ್ ಅವರನ್ನು 696 ಮತಗಳ ಅಂತರದಿಂದ ಸೋಲಿಸಿದ್ದರು. ಆಗ ಪಿ.ರಾಜೀವ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಿ.ರಾಜೀವ ಬಿಜೆಪಿಗೆ ಬಂದರು. ಮಹೇಂದ್ರ ಕೆ.ತಮ್ಮಣ್ಣವರ್ ಕಾಂಗ್ರೆಸ್ ಸೇರಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


