ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಚಿತ್ರ ಡೆವಿಲ್ ಬಿಡುಗಡೆಯ ತಿಂಗಳು ಬಂದೇ ಬಿಟ್ಟಿದೆ. ಮೊದಲಿಗೆ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದ್ದ ಡೆವಿಲ್ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 11ರಂದೇ ಬಿಡುಗಡೆಯಾಗಲಿದೆ.
ಹೀಗೆ ಒಂದು ದಿನ ಮುಂಚಿತವಾಗಿ ನಿಮ್ಮ ಮುಂದೆ ಬರುತ್ತೇವೆ ಎಂದಿರುವ ಡೆವಿಲ್ ಚಿತ್ರತಂಡ ಇದೀಗ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನೂ ಸಹ ಘೋಷಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಕ್ಸ್ ಖಾತೆಯನ್ನು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಬಳಕೆ ಮಾಡುತ್ತಿದ್ದು, ಅಲ್ಲಿ ಚಿತ್ರದ ಟ್ರೈಲರ್ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಇದೇ 5ರಂದು ಬೆಳಗ್ಗೆ 10.05ಕ್ಕೆ ಡೆವಿಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದ್ದು, ಅಭಿಮಾನಿಗಳಲ್ಲಿ ಕ್ಷಣಗಣನೆ ಆರಂಭವಾಗಿದೆ. ಇನ್ನು ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು, ಇತ್ತ ಚಿತ್ರ ಬಿಡುಗಡೆಯಾಗುತ್ತಿದ್ದು, ಪ್ರಚಾರದತ್ತ ಚಿತ್ರತಂಡ ಚಿತ್ತ ನೆಟ್ಟಿದೆ.
ಅಭಿಮಾನಿಗಳು ಭಿನ್ನ ವಿಭಿನ್ನ ರೀತಿಯಲ್ಲಿ ಡೆವಿಲ್ ಪ್ರಚಾರಕ್ಕೆ ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದಾರೆ. ಇನ್ನು ದರ್ಶನ್ ಜತೆ ಈ ಹಿಂದೆ ಆಪ್ತನಾಗಿದ್ದ ನಟ ಕಿಚ್ಚ ಸುದೀಪ್ ಸದ್ಯ ದೂರ ಇದ್ದು, ಸುದೀಪ್ ಹೆಸರಿನಲ್ಲಿ ಟ್ವೀಟ್ ಒಂದು ವೈರಲ್ ಆಗಿದೆ. ಹೌದು, ಕಿಚ್ಚ ಸುದೀಪ್ ಹೆಸರಿನ ಖಾತೆಯಿಂದ ಡೆವಿಲ್ 11ರಂದು ಬಿಡುಗಡೆಯಾಗುತ್ತಿದ್ದು, ದರ್ಶನ್‌ಗೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಆದರೆ ಇದು ನಕಲಿ ಖಾತೆಯಾಗಿದೆ.
ಆದರೆ ಇದು ದರ್ಶನ್ ಚಿತ್ರ ಬಿಡುಗಡೆ ಕುರಿತು ಮಾಡಿದ್ದ ಟ್ವೀಟ್‌ಗಿಂತ ಹೆಚ್ಚು ಜನರಿಗೆ ತಲುಪಿರುವುದು ವಿಶೇಷವೆನಿಸಿದೆ. ದರ್ಶನ್ ಖಾತೆಯಿಂದ ನವೆಂಬರ್ 22ರಂದು ಡೆವಿಲ್ ಬಿಡುಗಡೆ ಕುರಿತು ಬಂದಿದ್ದ ಟ್ವೀಟ್ ಇಂದಿಗೆ ( ಡಿಸೆಂಬರ್ 1) 1 ಲಕ್ಷದ 8 ಸಾವಿರ ಜನರಿಗೆ ತಲುಪಿದ್ದು, ಇದೇ ಸಮಯಕ್ಕೆ ನವೆಂಬರ್ 29ರಂದು ಸುದೀಪ್ ನಕಲಿ ಖಾತೆಯಿಂದ ಬಂದ ಟ್ವೀಟ್ 2 ಲಕ್ಷದ 42 ಸಾವಿರ ಜನರಿಗೆ ತಲುಪಿದೆ. ಲೈಕ್ಸ್ ಸಹ ನಕಲಿ ಖಾತೆಯ ಟ್ವೀಟ್‌ಗೆ ಹೆಚ್ಚಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


