ಕರ್ನಾಟಕ ಎಲ್ಲ ಭಾಷೆಯ ಚಿತ್ರಗಳನ್ನೂ ವೀಕ್ಷಿಸುವ ಪ್ರೇಕ್ಷಕರಿರುವ ರಾಜ್ಯ. ಅದರಲ್ಲೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ , ಮಂಗಳೂರು ರೀತಿಯ ದೊಡ್ಡ ನಗರಗಳು ಸೇರಿದಂತೆ ಇನ್ನೂ ಅನೇಕ ಪಟ್ಟಣಗಳಲ್ಲಿ ಪರಭಾಷಾ ಚಿತ್ರಗಳು ನಿಗದಿತ ಬಿಡುಗಡೆ ದಿನದಂದೇ ತೆರೆಗೆ ಅಪ್ಪಳಿಸುತ್ತವೆ.
ಕನ್ನಡ ಚಿತ್ರಗಳ ಹಾಗೆಯೇ ಅದ್ದೂರಿ ಸಂಭ್ರಮಾಚರಣೆಯ ಬಿಡುಗಡೆ ಪರಭಾಷಾ ಚಿತ್ರಗಳಿಗೆ ಸಿಗುತ್ತಲೇ ಇದೆ. ಅಲ್ಲದೇ ಇತ್ತೀಚೆಗೆ ಬೆಂಗಳೂರಿನಲ್ಲಿ ಪರಭಾಷೆಯ ಹಳೆಯ ಚಿತ್ರಗಳ ಮರುಬಿಡುಗಡೆ ಸಹ ಭರ್ಜರಿಯಾಗಿ ನಡೆದಿದೆ. ಅದೆಷ್ಟೋ ಪರಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾದರೂ ಕನ್ನಡಕ್ಕಿಂತ ಮೂಲಭಾಷೆಯ ಚಿತ್ರಕ್ಕೆ ಹೆಚ್ಚು ಪ್ರದರ್ಶನಗಳು ಸಿಕ್ಕಿವೆ.
ಈ ಮಟ್ಟಕ್ಕೆ ಪರಭಾಷೆಯ ಚಿತ್ರಗಳು ರಾಜ್ಯದಲ್ಲಿ ಬೇರೂರಲು ಕಾರಣ ಡಬ್ಬಿಂಗ್ ಇಲ್ಲದೇ ಮೂಲಭಾಷೆಯಲ್ಲೇ ಕನ್ನಡಿಗರು ಪರಭಾಷೆ ಚಿತ್ರಗಳನ್ನು ನೋಡಿದ್ದು ಹಾಗೂ ಕೆಲಸ ಹರಸಿ ಬೆಂಗಳೂರಿಗೆ ಬೇರೆ ರಾಜ್ಯಗಳ ಜನರು ಬಂದು ನೆಲೆಸಿರುವುದು ಎನ್ನಬಹುದು.
ಒಟ್ಟಿನಲ್ಲಿ ಇಂತಹ ಬೆಳವಣಿಗೆ ಹಾಗೂ ವಾತಾವರಣದಿಂದ ಕನ್ನಡ ಚಿತ್ರಳಿಗೆ ಅನ್ಯಾಯವಾಗುತ್ತಿದೆ ಎಂಬುದು ಕನ್ನಡದ ಅನೇಕ ಕಲಾವಿದರ ಕೂಗು. ಇದೀಗ ಹಿರಿಯ ಕಲಾವಿದ ಸಾಧು ಕೋಕಿಲ ಸಹ ಈ ಕುರಿತು ಮಾತನಾಡಿದ್ದು, ಇತ್ತೀಚೆಗಷ್ಟೆ ಬಿಡುಗಡೆಯಾದ ಕನ್ನಡ ಚಿತ್ರ ಫ್ಲರ್ಟ್‌ಗೆ ಪ್ರೇಕ್ಷಕರಿಂದ ಸರಿಯಾದ ಬೆಂಬಲ ಸಿಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.
ಇಂಡಸ್ಟ್ರಿನ ಮುಚ್ಚೇ ಬಿಡಬೇಕೇನೋ. ಇಂಡಸ್ಟ್ರಿನೇ ಇರಬಾರದೇನೋ. ಆ ಮಟ್ಟಕ್ಕೆ ನಮ್ಮ ಕನ್ನಡ ಪ್ರೇಕ್ಷಕರು ತೆಲುಗಿಗೆ ಹೋಗ್ತಾರೆ, ತಮಿಳು ಹೈಲೈಟ್ ಮಾಡ್ತಾರೆ, ಮಲಯಾಳಂ ಅದ್ಭುತ ಎನ್ನುತ್ತಾರೆ ಎಂದು ಸಾಧು ಕೋಕಿಲ ಬೇಸರ ಹೊರಹಾಕಿದ್ದಾರೆ.
ನಾನು ಫ್ಲರ್ಟ್ ಸಿನಿಮಾ ಬಗ್ಗೆ ಮಾತ್ರ ಹೇಳುತ್ತೇನೆ, ನಿರ್ಮಾಪಕ ಹೊರಾಂಗಣ ಪ್ರಚಾರಕ್ಕಾಗಿ ದೊಡ್ಡಮಟ್ಟದ ಹಣವಿಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಬೇಕಾದ ಪ್ರಚಾರ ಮಾಡಿ ಚಿತ್ರಮಂದಿರಕ್ಕೆ ತನ್ನ ಚಿತ್ರವನ್ನು ತಂದಿರುತ್ತಾನೆ. ಅದರ ರಿಪೋರ್ಟ್ ನೋಡಿ ಅಥವಾ ಚಿತ್ರಮಂದಿರಕ್ಕೆ ಬಂದು ನೋಡಿ, ಆ ಒಂದು ಸೌಜನ್ಯ ಆದ್ರೂ ಎಲ್ಲಿದೆ ನಮ್ಮ ಕನ್ನಡ ಪ್ರೇಕ್ಷಕರಿಗೆ? ಇಲ್ಲ ಎಂದರೆ ಕನ್ನಡ ಚಿತ್ರರಂಗವನ್ನು ಮುಚ್ಚಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಮುಂದುವರಿದು ಮಾತನಾಡಿದ ಸಾಧು ಕೋಕಿಲ ಕಷ್ಟಪಟ್ಟು ಒಂದೊಳ್ಳೆ ಕಂಟೆಂಟ್ ಇಟ್ಟುಕೊಂಡು ಮಾಡಿರುವ ಚಿತ್ರ ಫ್ಲರ್ಟ್. ಚೆನ್ನಾಗಿಲ್ಲ ಎಂದರೆ ನೀವು ಏನೂ ಬೇಕಾದರೂ ಮಾತನಾಡಬಹುದು, ಇದೇ ತುಮಕೂರಿನಲ್ಲಿ ಕಾಲೇಜು ಹುಡುಗರು ಚಿತ್ರಮಂದಿರದ ಪರದೆಯನ್ನು ಕಿತ್ತಾವುದು ಬಾಕಿ ಅಷ್ಟು ಚೆನ್ನಾಗಿದೆ ಎಂದರು. ಹೀಗಾಗಿ ಚಿತ್ರಮಂದಿರಕ್ಕೆ ಬಂದು ನೋಡಿ, ಚೆನ್ನಾಗಿಲ್ಲ ಎಂದಾಗ ಬಯ್ಯಿರಿ. ಆದರೆ ಚಿತ್ರಮಂದಿರಕ್ಕೆ ಬಂದರೆ ನಿಮಗೆ ಮೋಸ ಆಗಲ್ಲ. ಕನ್ನಡ ಚಿತ್ರರಂಗ ಇಷ್ಟೆ ಅಂತ ಸುಮ್ಮನೆ ಇದ್ದುಬಿಡಬೇಡಿ, ದಯವಿಟ್ಟು ಚಿತ್ರಮಂದಿರಗಳಿಗೆ ಬನ್ನಿ, ಕನ್ನಡ ಚಿತ್ರರಂಗವನ್ನು ಉಳಿಸಿ ಎಂದು ನಾನು ಕೇಳುತ್ತಿಲ್ಲ ಒಂದೊಳ್ಳೆ ಚಿತ್ರವನ್ನು ಉಳಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
video: https://www.facebook.com/share/r/1AQkHpYobz
ಯುವಕನಿಂದ ಲೈಂಗಿಕ ಕಿರುಕುಳ: ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


