ಅಹ್ಮದಾಬಾದ್: ನಿನ್ನೆ ( ಮೇ 2 ) ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 51ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟನ್ಸ್ 38 ರನ್‌ಗಳ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್ ಕಲೆಹಾಕಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 225 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.
ಈ ಗೆಲುವಿನ ಮೂಲಕ ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನಕ್ಕೆ ಕುಸಿದಿದೆ. ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ ತಂಡಗಳೂ ಸಹ ತಲಾ 10 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು 3 ಪಂದ್ಯಗಳಲ್ಲಿ ಸೋತು 14 ಅಂಕಗಳನ್ನು ಪಡೆದುಕೊಂಡಿವೆ. ಆದರೆ ಗುಜರಾತ್ ಟೈಟನ್ಸ್ ಆರ್‌ಸಿಬಿಗಿಂತ ಹೆಚ್ಚಿನ ನೆಟ್ ರನ್‌ರೇಟ್ ಹೊಂದಿರುವ ಕಾರಣ ಎರಡನೇ ಸ್ಥಾನಕ್ಕೇರಿದೆ.
ಇನ್ನು ಈ ಪಂದ್ಯದಲ್ಲಿ ಸೋಲುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಅಧಿಕೃತವಾಗಿ ಎಲಿಮಿನೇಟ್ ಆಗದಿದ್ದರೂ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನಂತೂ ಕಳೆದುಕೊಂಡಿದೆ. ಏಕೆಂದರೆ ಸನ್‌ರೈಸರ್ಸ್ ಹೈದರಾಬಾದ್ 10 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆದ್ದು 7 ಪಂದ್ಯಗಳಲ್ಲಿ ಸೋತು 6 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನುಳಿದ 4 ಪಂದ್ಯಗಳಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದರೂ 8 ಅಂಕ ಗಳಿಸಲಿದ್ದು ಒಟ್ಟು 14 ಅಂಕಗಳಾಗಲಿದೆ. ಆದರೆ ಪ್ಲೇಆಫ್ ಪ್ರವೇಶಿಸಲು 16 ಅಂಕಗಳು ಈ ಟೂರ್ನಿಯಲ್ಲಿ ಕನಿಷ್ಟ ಅಂಕಗಳಾಗಲಿದ್ದು, ಸನ್‌ರೈಸರ್ಸ್‌ಗೆ ಅದು ಅಸಾಧ್ಯ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


