ಬೆಂಗಳೂರು: ನಿನ್ನೆ ( ನವೆಂಬರ್ 2 ) ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಐಸಿಸಿ ವನಿತೆಯರ ವಿಶ್ವಕಪ್ 2025ರ ಫೈನಲ್ ಪಂದ್ಯದಲ್ಲಿ ಭಾರತ 52 ರನ್‌ಗಳ ಭರ್ಜರಿ ಗೆಲುವನ್ನು ಕಾಣುವ ಮೂಲಕ ಇದೇ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡು ಐತಿಹಾಸಿಕ ದಾಖಲೆಯನ್ನು ಬರೆದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 299 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ ದೀಪ್ತಿ ಶರ್ಮಾ ಬೌಲಿಂಗ್ ದಾಳಿಗೆ ತತ್ತರಿಸಿ 45.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲ್‌ಔಟ್ ಆಯಿತು.
ಹೀಗೆ ಭರ್ಜರಿ ಗೆಲುವು ಕಂಡ ಭಾರತ ವನಿತೆಯರ ತಂಡದ ಆಟವನ್ನು ದೂರದರ್ಶನದ ಮೂಲಕ ವೀಕ್ಷಿಸಿದ ವಿರಾಟ್ ಕೊಹ್ಲಿ ತಂಡ ವಿಜಯಪತಾಕೆ ಹಾರಿಸುತ್ತಿದ್ದಂತೆ ಟಿವಿಯಲ್ಲಿನ ಸಂಭ್ರಮಾಚರಣೆ ಫೋಟೊವನ್ನು ಕ್ಲಿಕ್ಕಿಸಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಂಡಕ್ಕೆ ಶುಭಕೋರಿದ್ದಾರೆ.
ʼನಮ್ಮ ಹುಡುಗಿಯರು ಇತಿಹಾಸ ಸೃಷ್ಟಿಸಿಬಿಟ್ಟರು. ಹಲವು ವರ್ಷಗಳ ಕಠಿಣ ಪರಿಶ್ರಮ ಕೊನೆಗೂ ಜೀವ ಪಡೆದುಕೊಂಡಿರುವುದನ್ನು ನೋಡಲು ಓರ್ವ ಭಾರತೀಯನಾಗಿ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಅವರು ದೊಡ್ಡ ಚಪ್ಪಾಳೆಗೆ ಅರ್ಹರಾಗಿದ್ದು, ಈ ದೊಡ್ಡ ಸಾಧನೆ ಮಾಡಿದ ಹರ್ಮನ್‌ಪ್ರೀತ್ ಹಾಗೂ ತಂಡದವರಿಗೆ ಅಭಿನಂದನೆಗಳು. ಹಾಗೆಯೇ ಈ ತಂಡದ ಹಿಂದೆ ಕೆಲಸ ನಿರ್ವಹಿಸಿದ ಮ್ಯಾನೇಜ್‌ಮೆಂಟ್‌ಗೂ ಸಹ ಅಭಿನಂದನೆಗಳು. ಈ ಸಮಯವನ್ನು ಆನಂದಿಸಿ. ನಿಮ್ಮ ಈ ಗೆಲುವು ತಲೆಮಾರುಗಳ ಮಹಿಳೆಯರಿಗೆ ಕ್ರೀಡೆಯನ್ನು ಎತ್ತಿಹಿಡಿಯಲು ಸ್ಪೂರ್ತಿಯನ್ನು ನೀಡಲಿದೆʼ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


