ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳನ್ನು ಪೂರೈಸಿದ್ದು, ಇನ್ನುಳಿದ ಎರಡೂವರೆ ವರ್ಷಗಳಿಗೆ ಡಿಕೆ ಶಿವಕುಮಾರ್ ಅವರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು, ಬಿಟ್ಟುಕೊಡಬಾರದು ಎಂಬ ಚರ್ಚೆ ಜೋರಾಗಿದೆ.
ಇಬ್ಬರೂ ನಾಯಕರ ಬಣಗಳ ನಡುವಿನ ಹಗ್ಗ ಜಗ್ಗಾಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದ್ದು, ಇಬ್ಬರನ್ನೂ ಪರಸ್ಪರ ಭೇಟಿ ಮಾಡಲು ತಿಳಿಸಿತ್ತು. ಅದರಂತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎರಡು ಬಾರಿ ಉಪಹಾರ ಸಭೆಯನ್ನು ನಡೆಸಿದ್ದು, ನಾವಿಬ್ಬರೂ ಯಾವತ್ತಿದ್ದರೂ ಬ್ರದರ್ಸ್ ಎಂದು ಪುನರುಚ್ಚರಿಸಿದ್ದಾರೆ.
ಈ ಮೂಲಕ ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕಿಲ್ಲ ಎಂಬ ಸಂದೇಶ ಹೊರಬಿದ್ದಿದ್ದು,ಬಜೆಟ್ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ.
ಈ ಕುರಿತು ಮಾಧ್ಯಮದವರ ಜತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನವನ್ನು ಬಿಡುವುದಂತೂ ಪಕ್ಕ, ಮೂವತ್ತು ತಿಂಗಳಾದರೂ ಬಿಡಬೇಕು, ಇನ್ನೊಂದು ಅವಧಿಯಲ್ಲಾದರೂ ಬಿಡಲೇಬೇಕು. ಅದನ್ನು ಹೈಕಮಾಂಡ್ ಹಾಗೂ ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದರು.
ಇನ್ನು ದಲಿತ ಮುಖ್ಯಮಂತ್ರಿ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಈ ಬಾರಿ ದಲಿತ ಸಿಎಂ ಕಾರ್ಡ್ ಪ್ಲೇ ಮಾಡುವುದಿಲ್ಲ ಎಂದರು. ಅಲ್ಲದೇ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುಗಿದಿದೆ, ಸದ್ಯಕ್ಕೆ ಅದರ ಬಗ್ಗೆ ಚರ್ಚಿಸುವುದು ಬೇಡ ಬಿಟ್ಟುಬಿಡಿ ಎಂದು ಮಾಧ್ಯಮದವರ ಬಳಿ ಮನವಿ ಮಾಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


