ನಂಜನಗೂಡು: ಮಧ್ಯರಾತ್ರಿ ಮನೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಮುಂದಾಗಿದ್ದ ವ್ಯಕ್ತಿ ವಿಧವೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರದ ಯತ್ನ ನಡೆಸಿದ್ದು, ಆತನನ್ನು ಗ್ರಾಮಸ್ಥರೇ ಹಿಡಿದು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ನಂತರ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ನಂಜನಗೂಡು ತಾಲ್ಲೂಕಿನ ವರುಣ ಹೋಬಳಿಯ ಬೊಕ್ಕಹಳ್ಳಿಯಲ್ಲಿ ನಡೆದಿದೆ.
ಬೊಕ್ಕಹಳ್ಳಿಯ ನಿವಾಸಿ ಹರ್ಷ ಎಂಬಾತನೇ ಈ ಕೃತ್ಯ ಎಸಗಿದ ಯುವಕ. ಇದೇ ಗ್ರಾಮದ ದಿವಂಗತ ಶಿವ ಕುಮಾರ್ ಅವರ ಪತ್ನಿ ಮಂಜುಳ ಜೀವನೋಪಾಯಕ್ಕಾಗಿ ಮೈಸೂರಿನ ಬಿಸಿಎಂ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ಇವರಿಗೆ ಇರುವ ಒಂದು ಎಕರೆ ಜಮೀನನ್ನು ಬೇರೊಬ್ಬರಿಗೆ ಭೋಗ್ಯ ನೀಡಿದ್ದಾರೆ. ಅದರಿಂದ ಬಂದ 3 ಲಕ್ಷ ರೂ. ಗಳನ್ನು ಮನೆಯಲ್ಲಿ ಇಟ್ಟಿದ್ದರು.
ಈ ಕುರಿತು ಮಾಹಿತಿ ಇದ್ದ ಹರ್ಷ ಜ. 1ರ ಮಧ್ಯ ರಾತ್ರಿ ವಿಧವೆ ಮಂಜುಳ ಅವರ ಮನೆಗೆ ನುಗ್ಗಿದ್ದಾನೆ. ಶಬ್ದವಾದಾಗ ಎಚ್ಚರಗೊಂಡ ಮಂಜುಳ ಪರಿಶೀಲಿಸಿದಾಗ ಅತ್ತೆ ಚಿನ್ನಮ್ಮ ಮಲಗಿದ್ದ ಮಂಚದ ಕೆಳಗೆ ಹರ್ಷ ಅವಿತುಕೊಂಡಿರುವುದು ಗೊತ್ತಾಗಿದೆ.
ನಂತರ ಹರ್ಷ ಮಂಜುಳ ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವಿಚಾರ ಗ್ರಾಮಸ್ಥರಿಗೆ ಗೊತ್ತಾಗಿ, ಆತನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಥಳಿಸಿದಾಗ ಕಳ್ಳತನ ಮಾಡಲು ಮನೆಗೆ ನುಗ್ಗಿದ್ದಾಗಿ ಹರ್ಷ ಒಪ್ಪಿಕೊಂಡಿದ್ದಾನೆ. ನಂತರ ಆತನನ್ನು ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮನೆ ಕಳ್ಳತನದ ಬಗ್ಗೆ ತನಿಖೆ ಆರಂಭಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


