ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದಿ.ಡಾ.ರಾಜ್ಕುಮಾರ್ ಅವರ ಸಹೋದರಿ ನಾಗಮ್ಮ ಇಹಲೋಕ ತ್ಯಜಿಸಿದ್ದಾರೆ. ನಾಗಮ್ಮ ಅವರಿಗೆ ಒಟ್ಟು 8 ಜನ ಮಕ್ಕಳು. ಅವರಲ್ಲಿ 5 ಪುತ್ರರು, 3 ಪುತ್ರಿಯರು. ದೊಡ್ಡಮಗ ಗೋಪಾಲ್ ಜೊತೆ ನಾಗಮ್ಮ ಗಾಜನೂರಿನಲ್ಲಿ ವಾಸವಿದ್ದರು.
ತಮ್ಮನ್ನು ಆಡಿಸಿ ಬೆಳೆಸಿದ ನಾಗಮ್ಮ ಪಾರ್ಥಿವ ಶರೀರ ಕಂಡು ನಟ ಶಿವರಾಜ್ ಕುಮಾರ್ ಭಾವುಕರಾದರು. ಅಪ್ಪಾಜಿಗೆ ಯಾವಾಗಲೂ ನಮ್ಮ ಜೊತೆ ಅಜ್ಜಿ, ನಾಗತ್ತೆ ಇರಬೇಕಿತ್ತು. ‘ಮದ್ರಾಸ್ ಹಾಗೂ ಗಾಜನೂರಿನಲ್ಲಿ ಯಾವಾಗಲೂ ನಮ್ಮ ಜೊತೆಗೆ ನಾಗತ್ತೆ ಇರುತ್ತಿದ್ದರು. ಅಪ್ಪಾಜಿ ಕುಟುಂಬದಿಂದ ಇದ್ದ ಹಿರಿಯರು ಇವರೊಬ್ಬರೇ’ ಎಂದು ಕಂಬನಿ ಮಿಡಿದರು.
‘ಕಳೆದ ಎರಡು ವಾರದಿಂದ ನಾಗತ್ತೆ ನೋಡಲು ಬರಬೇಕು ಎಂದುಕೊಂಡಿದ್ದೆ. ನಿನ್ನೆ ನಾನು ಬೆಂಗಳೂರಲ್ಲಿ ಇರಲಿಲ್ಲ, ಗೋವಾಗೆ ತೆರಳಿದ್ದೆ. ಲ್ಯಾಂಡ್ ಆದ ಕೂಡಲೇ ಸುದ್ದಿ ಬಂತು. ಅಪ್ಪಾಜಿ ಫ್ಯಾಮಿಲಿಯ ಹಿರಿಯರು ಎಂದು ಇದ್ದವರು ನಾಗತ್ತೆ ಅವರೊಬ್ಬರೆ. ಕೊನೆಯವರೆಗೂ ಅಪ್ಪು ಸಾವಿನ ಸುದ್ದಿ ಗೊತ್ತಿರಲಿಲ್ಲ. ನೆನೆಸಿಕೊಂಡರೇ ಈಗಲೂ ಕಷ್ಟ ಆಗುತ್ತದೆ’ ಎಂದರು.
ನನಗೆ ಸ್ವಂತ ತಾಯಿ ಅಂತೆ ನಾಗತ್ತೆ ಕೂಡ ನನ್ನ ತಾಯಿ ಎಂದು ಹೇಳಿದರು. ‘ವೇದ’ ಚಿತ್ರ ಕಂಡು ಅಪ್ಪಾಜಿ ಥರಾ ಕಾಣ್ತಿಯಲ್ಲಾ ಮಗನೇ ಎಂದಿದ್ದರು. ನಾಗತ್ತೆಗೆ ಎಲ್ಲಾ ಮಕ್ಕಳನ್ನು ಕಂಡರೂ ಇಷ್ಟ. “ನಾನು ಕಾಲೇಜ್‌ಗೆ ಹೋಗಬೇಕಾದರೆ ದುಡ್ಡು ಕೇಳಿದ್ರೆ, ʻನೀನು ಕೇಳಬೇಕಾ ಕಂದ? ತಗೋʼ ಅಂತ ಕೀ ಕೊಟ್ಟುಬಿಡುತ್ತಿದ್ದರು. ಆಗ ಇಲ್ಲ ಅತ್ತೆ ಹಾಗೆಲ್ಲ ಆಗಲ್ಲ, ನೀವೆ ಕೊಡಬೇಕು ಅಷ್ಟೇ. ಅಪ್ಪ-ಅಮ್ಮ ನಿಮ್ಮ ಕೈಯಲ್ಲಿ ಜವಾಬ್ದಾರಿ ವಹಿಸಿರಬೇಕಾದರೆ, ನಾನು ತಗೊಳೋದು ಸರಿ ಅಲ್ಲ ಅಂತ ಹೇಳುತ್ತಿದ್ದೆ” ಎಂದಿದ್ದಾರೆ ನಟ ಶಿವರಾಜ್‌ಕುಮಾರ್.
,ಪ್ರಜ್ವಲ್ ರೇವಣ್ಣಗೆ ಇಂದಿನಿಂದ ಬಿಳಿ ಸಮವಸ್ತ್ರ, 8 ಗಂಟೆ ಕೆಲಸ; ಕೈದಿ ಸಂಖ್ಯೆ ಎಷ್ಟು?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


