ಬಿಹಾರದ 243 ಸದಸ್ಯ ಬಲದ ವಿಧಾನಸಭೆಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆಯಲಿದೆ. ನವೆಂಬರ್ 11ರಂದು 2ನೇ ಹಂತದ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ, ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಎದುರಾಳಿಗಳು. ಯಾರಿಗೆ ಎಷ್ಟು ಸೀಟು?, ಬಿಹಾರದ ಅಧಿಕಾರ ಯಾರಿಗೆ? ಎಂಬ ಚರ್ಚೆಗಳು ಸಾಗಿವೆ.
ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎನ್‌ಡಿಟಿವಿಯ ಬಿಹಾರ ಪವರ್ ಪ್ಲೇ ಕಾರ್ಯಕ್ರಮದಲ್ಲಿ ಎನ್‌ಡಿಟಿವಿ ಸಿಇಒ ಮತ್ತು ಎಡಿಟರ್-ಇನ್-ಚೀಫ್ ರಾಹುಲ್ ಕನ್ವಲ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಿಹಾರದಲ್ಲಿ ಎಷ್ಟು ಸೀಟು ಗೆಲ್ಲಬಹುದು? ಎಂದು ಮಾತನಾಡಿದ್ದಾರೆ.
ಅಮಿತ್ ಶಾ ಲೆಕ್ಕಾಚಾರ: ಅಮಿತ್ ಶಾ, “ಎನ್‌ಡಿಎ ಬಿಹಾರದಲ್ಲಿ 160 ಸ್ಥಾನಗಳನ್ನು ಗೆದ್ದು, ಎರಡು ಮೂರನೇ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. 5ನೇ ಬಾರಿಗೆ ಬಿಹಾರದಲ್ಲಿ ಅಧಿಕಾರವನ್ನು ಮರಳಿ ಪಡೆಯುತ್ತೇವೆ” ಎಂದು ಹೇಳಿದ್ದಾರೆ.
“ದೇಶದಲ್ಲೇ ಬಿಹಾರ ರಾಜಕೀಯ ತಿಳಿದಿರುವ ಜನರು ಇರುವ ರಾಜ್ಯವಾಗಿದೆ. ಕಳೆದ 20 ವರ್ಷಗಳಲ್ಲಿ ರಾಜ್ಯದ ಜನರು ಅಭಿವೃದ್ಧಿ ಮಾಡಿರುವುದಕ್ಕೆ ಸಾಕ್ಷಿಯಾಗಿದ್ದಾರೆ. ಆದ್ದರಿಂದ ಎನ್‌ಡಿಎ ಬೆಂಬಲಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನೀವು ಬಿಹಾರದ ಯಾವುದೇ ಯುವಕ/ ಯುವತಿಯನ್ನು ಕೇಳಿ. ನಿತೀಶ್ ಕುಮಾರ್ ಆಡಳಿತದ ಅಡಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳುತ್ತಾರೆ. ಇದು ಜನರ ಮೂಲಭೂತ ಅಗತ್ಯವಾಗಿದೆ” ಎಂದು ತಿಳಿಸಿದ್ದಾರೆ.
ಬಿಹಾರದ ಅಭಿವೃದ್ಧಿಗೆ ಸಂಬಂಧಿಸಿದ ರಿಪೋರ್ಟ್ ಕಾರ್ಡ್ ನೀಡಿದ ಅಮಿತ್ ಶಾ, “ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯನ್ನು (ಗಂಗಾ ನದಿಯ ಮೇಲೆ ನಿರ್ಮಾಣಗೊಂಡ 4 ಸೇತುವೆಗಳು ಹಾಗೂ ಇನ್ನೂ 10 ಸೇತುವೆಗಳ ಯೋಜನೆ), ಉದ್ಯೋಗ ಸೃಷ್ಟಿ (ಸ್ವಯಂ ಉದ್ಯೋಗಕ್ಕೆ ನೀಲಿನಕ್ಷೆ ಹಾಗೂ ಮಹಿಳೆಯರಿಗೆ ಸಹಾಯಧನ), ಕಾನೂನು ಮತ್ತು ಸುವ್ಯವಸ್ಥೆಯ ಸುಧಾರಣೆ ಮತ್ತು ಮಾವೋವಾದಿ ಹಿಂಸಾಚಾರದ ನಿರ್ಮೂಲನೆ” ಸೇರಿದಂತೆ ಅನೇಕ ಸಾಧನೆಗಳನ್ನು ವಿವರಿಸಿದರು.
“ಈ ಹಿಂದೆ ಬಿಹಾರದ ಆಡಳಿತದಲ್ಲಿ ದರೋಡೆ, ಕೊಲೆ ಮತ್ತು ಲೂಟಿಗೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿದ್ದವು. ಆದರೆ ಇಂದು ಚರ್ಚೆ ಅಭಿವೃದ್ಧಿಯ ಬಗ್ಗೆ ನಡೆಯುತ್ತಿದೆ” ಎಂದು ಅಮಿತ್ ಶಾ ಹೇಳಿದರು.
“ಬಿಜೆಪಿ ಮತ್ತು ಎನ್‌ಡಿಎಯ ಮುಖ್ಯ ಚುನಾವಣಾ ತಂತ್ರಜ್ಞ ನಿತೀಶ್ ಕುಮಾರ್. ಈ ಚುನಾವಣೆಯಲ್ಲಿ ಆಡಳಿತ ಮೈತ್ರಿಕೂಟದ ಪ್ರಮುಖವಾದ ನಾಯಕ ಸಹ ಅವರೇ” ಎಂದು ಮತ್ತೊಮ್ಮೆ ಅಮಿತ್ ಶಾ ಸ್ಪಷ್ಟಪಡಿಸಿದರು.
“ನಾನು ಇದನ್ನು 50 ಬಾರಿ ಹೇಳಿದ್ದೇನೆ. ನಾವು ನಿತೀಶ್ ಕುಮಾರ್ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಅವರು ಮುಖ್ಯಮಂತ್ರಿ ಮತ್ತು ನಾವು ಅವರ ನಾಯಕತ್ವದಲ್ಲೇ ಹೋರಾಟ ಮಾಡುತ್ತಿದ್ದೇವೆ” ಎಂದು ಎನ್‌ಡಿಎ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಬಿಹಾರದ ವಿಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟ ಆರ್‌ಜೆಡಿಯ ಯುವ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ. ಆದರೆ ಸಿಎಂ ಅಭ್ಯರ್ಥಿ ಘೋಷಣೆ ಮಾಡದ ಎನ್‌ಡಿಎ ಮೈತ್ರಿಕೂಟದಲ್ಲಿ ಒಮ್ಮತವಿಲ್ಲ ಎಂದು ಟೀಕಿಸಲಾಗುತ್ತಿದೆ.
ಎನ್‌ಡಿಎ ಮೈತ್ರಿಯನ್ನು ವ್ಯಂಗ್ಯವಾಡಿದ ಆರ್‌ಜೆಡಿ, “ಅವರು ಇನ್ನೂ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ, ಅವರ ಮನೆಯಲ್ಲಿ ಹೊಂದಾಣಿಕೆ ಇಲ್ಲ” ಎಂದು ಟೀಕಿಸುತ್ತಿದೆ.
ಚುನಾವಣೆಯ ಬಳಿಕ ನಿತೀಶ್ ಕುಮಾರ್‌ಗೆ ಅವಕಾಶ ನೀಡುವುದಿಲ್ಲ. ಹೊಸ ಮುಖವೊಂದನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬಹುದು ಎಂಬ ಊಹಾಪೋಹಗಳಿವೆ. ನಿತೀಶ್ ಕುಮಾರ್ ಕಳೆದ 20 ವರ್ಷಗಳಿಂದ ಸಿಎಂ ಆಗಿದ್ದಾರೆ. ಆದ್ದರಿಂದ ಈ ಬಾರಿ ಸಿಎಂ ಬದಲಾವಣೆ ಮಾಡಲಾಗುತ್ತದೆ ಎಂಬ ಚರ್ಚೆಯೂ ಇದೆ.
ನಿತೀಶ್ ಕುಮಾರ್ ಆರೋಗ್ಯ ಸ್ಥಿತಿ ಕುರಿತು ಚರ್ಚೆಗಳು ಇದೆ. ಇದಕ್ಕೆ ಉತ್ತರ ಕೊಟ್ಟಿರುವ ಅಮಿತ್ ಶಾ, ’74 ವರ್ಷದ ಮುಖ್ಯಮಂತ್ರಿಯ ಆರೋಗ್ಯದ ಬಗ್ಗೆ ಕೆಲವರಲ್ಲಿ ಆತಂಕವೂ ಇದೆ. ಆದರೆ ನಿತೀಶ್ ಕುಮಾರ್ ದಿನಕ್ಕೆ 5 ಚುನಾವಣಾ ಸಮಾವೇಶಗಳನ್ನು ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


