ಕರ್ನಾಟಕದ ಸರ್ಕಾರಿ ನೌಕರರ ಬಹುದಿನದ ಬೇಡಿಕೆ ಕುರಿತು ರಾಜ್ಯ ಸರ್ಕಾರ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಲಕ್ಷಾಂತರ ಸರ್ಕಾರಿ ಉದ್ಯೋಗಿಗಳು ಸರ್ಕಾರದ ತೀರ್ಮಾನಕ್ಕಾಗಿ ಕಾದು ಕುಳಿತಿದ್ದಾರೆ. ನೌಕರರ ಬೇಡಿಕೆ ಕುರಿತು ವರದಿ ತಯಾರಾಗಿದ್ದು, ಶೀಘ್ರವೇ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
7ನೇ ವೇತನ ಆಯೋಗದ ವರದಿ ಜಾರಿ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಬಳಿಕ ಸರ್ಕಾರಿ ನೌಕರರ ಮತ್ತೊಂದು ಬೇಡಿಕೆ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸುವುದು.
ಕರ್ನಾಟಕ ಸರ್ಕಾರ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿಗೊಳಿಸುವ ಕುರಿತು ವರದಿ ನೀಡಲು ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ಈಗ ವರದಿಯನ್ನು ತಯಾರು ಮಾಡಿದ್ದು, ಈ ತಿಂಗಳಿನಲ್ಲಿಯೇ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ರಾಜ್ಯ ಸರ್ಕಾರ ವರದಿಯನ್ನು ಪರಿಶೀಲನೆ ಮಾಡಿ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ದೇಶದ ಕೆಲವು ರಾಜ್ಯಗಳು ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿಗೊಳಿಸಿವೆ.
ಒಪಿಎಸ್ ಕುರಿತು ಅಪ್‌ಡೇಟ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗ ಎನ್‌ಪಿಎಸ್ ಸಮಿತಿ ಸದಸ್ಯರು ಮತ್ತು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ.ರೇಜು ಎಂ.ಟಿ. ಅವರನ್ನು ಭೇಟಿ ಮಾಡಿತ್ತು.
ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವ ಕುರಿತು ವಿವರವಾಗಿ ಚರ್ಚೆ ಮಾಡಿತು. ಆಗ ಕಾರ್ಯದರ್ಶಿಗಳು ವಾರಾಂತ್ಯದೊಳಗೆ ಸಭೆ ಕರೆದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿಗೊಳಿಸುವ ಸಂಬಂಧ ಸರ್ಕಾರದ ಜೊತೆ ಹಲವಾರು ಬಾರಿ ಸಿ.ಎಸ್.ಷಡಾಕ್ಷರಿ ಮಾತುಕತೆಯನ್ನು ನಡೆಸಿದ್ದಾರೆ. ಅಲ್ಲದೇ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಸಿ.ಎಸ್.ಷಡಾಕ್ಷರಿ ಅವರು ಸಹ ರಾಜ್ಯದ ಸರ್ಕಾರಿ ನೌಕರರಿಗೆ ಈ ಬೇಡಿಕೆ ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ವರದಿ ಯಾವ ಹಂತದಲ್ಲಿದೆ, ಯಾವಾಗ ಸಲ್ಲಿಕೆಯಾಗಲಿದೆ? ಎಂದು ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪಕ್ಷ 2023ರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಿಗೆ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿ ಮಾಡಲಾಗುತ್ತದೆ ಎಂದು ಭರವಸೆ ನೀಡಿತ್ತು. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದು, ನೌಕರರು ಭರವಸೆ ಈಡೇರಿಸಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚನೆ ಮಾಡಿತ್ತು. ಆದರೆ ಈ ಸಮಿತಿ ವರದಿ ನೀಡಲು ಕಾಲಮಿತಿ ನಿಗದಿ ಮಾಡಿರಲಿಲ್ಲ. ಆದರೆ ಈಗ ಸಮಿತಿ ವರದಿಯನ್ನು ಸಿದ್ಧಗೊಳಿಸಿದ್ದು, ಸರ್ಕಾರಕ್ಕೆ ಸಲ್ಲಿಕೆ ಮಾಡುವ ಕಾರ್ಯ ಬಾಕಿ ಇದೆ.
2022ರ ರಾಜ್ಯ ಬಜೆಟ್‌ನಲ್ಲಿ ರಾಜಸ್ಥಾನ, ಛತ್ತೀಸಗಡ, ಜಾರ್ಖಂಡ್ ರಾಜ್ಯಗಳು ಎನ್‌ಪಿಎಸ್ ರದ್ದು ಮಾಡಿವೆ. ಕರ್ನಾಟಕ ರಾಜ್ಯ ಸರ್ಕಾರ ಕೂಡಾ ಎನ್‌ಪಿಎಸ್ ರದ್ದುಪಡಿಸಬೇಕು ಓಪಿಎಸ್ ಮರು ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರು ಬೇಡಿಕೆ ಮುಂದಿಟ್ಟಿದ್ದಾರೆ.
ಒಪಿಎಸ್ ಸರ್ಕಾರಿ ನೌಕರರ ಸಂಧ್ಯಾ ಕಾಲದ ಸಾಮಾಜಿಕ, ಆರ್ಥಿಕ ಭದ್ರತೆಯ ಪ್ರಶ್ನೆಯಾಗಿದೆ. ಗೌರವ ಮತ್ತು ಘನತೆಯ ಪ್ರಶ್ನೆಯೂ ಆಗಿದೆ. ಎನ್‌ಪಿಎಸ್ ಜಾರಿಯಾಗಿ 16 ವರ್ಷ ಕಳೆದಿದೆ. ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಸರ್ಕಾರಿ ನೌಕರರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


