ಲಾಹೋರ್: ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 50 ರನ್‌ಗಳ ಗೆಲುವು ಸಾಧಿಸಿದ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಿದ್ದು, ಭಾನುವಾರ ( ಮಾರ್ಚ್ 9 ) ದುಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಟ್ರೋಫಿಗಾಗಿ ಅಂತಿಮ ಸೆಣಸಾಟ ನಡೆಸಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 363 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 9 ವಿಕೆಟ್ 312 ರನ್ ಕಲೆಹಾಕಿತು.
ನ್ಯೂಜಿಲೆಂಡ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಕಣಕ್ಕಿಳಿದರು. ವಿಲ್ ಯಂಗ್ 21 ರನ್ ಗಳಿಸಿ ಔಟ್ ಆದರು. ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ರಚಿನ್ ರವೀಂದ್ರ ಹಾಗೂ ಕೇನ್ ವಿಲಿಯಮ್ಸನ್ 164 ರನ್‌ಗಳ ಜತೆಯಾಟವನ್ನಾಡಿ ಅಬ್ಬರಿಸಿ ಇಬ್ಬರೂ ಸಹ ಶತಕ ಬಾರಿಸಿದರು. ರಚಿನ್ ರವೀಂದ್ರ 101 ಎಸೆತಗಳಲ್ಲಿ 108 ರನ್ ಬಾರಿಸಿದರೆ, ಕೇನ್ ವಿಲಿಯಮ್ಸನ್ 94 ಎಸೆತಗಳಲ್ಲಿ 102 ರನ್ ಗಳಿಸಿದರು. ಇನ್ನುಳಿದಂತೆ ಡೇರಿಲ್ ಮಿಚೆಲ್ 37 ಎಸೆತಗಳಲ್ಲಿ 49 ರನ್, ಟಾಮ್ ಲಾಥಮ್ 4, ಮೈಕೆಲ್ ಬ್ರೇಸ್‌ವೆಲ್ 16, ಮಿಚೆಲ್ ಸ್ಯಾಂಟ್ನರ್ ಅಜೇಯ 2 ಹಾಗೂ ಗ್ಲೆನ್ ಫಿಲಿಪ್ಸ್ 27 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸಿದರು.
ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ 3 ವಿಕೆಟ್, ಕಗಿಸೊ ರಬಾಡಾ 2 ವಿಕೆಟ್ ಹಾಗೂ ಮಲ್ಡರ್ ಒಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್: ನ್ಯೂಜಿಲೆಂಡ್ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ಹರಿಣಗಳು ಕೇವಲ 20 ರನ್‌ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ತಂಡದ ಆರಂಭಿಕ ಆಟಗಾರ ರಿಕೆಲ್ಟನ್ 17 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಟೆಂಬಾ ಬವುಮಾ 56 ರನ್ ಹಾಗೂ ವಾನ್‌ಡರ್ ಡಸನ್ 69 ರನ್ ಗಳಿಸಿರಾದರೂ ಗುರಿಗೆ ತಕ್ಕಂತ ವೇಗದ ಆಟವನ್ನಾಡಲಿಲ್ಲ. ಆರಂಭಿಕ ಆಘಾತ ಅನುಭವಿಸಿದ್ದ ತಂಡಕ್ಕೆ ಇಬ್ಬರ ಆಟ ಚೇತರಿಕೆ ನೀಡಿತಾದರೂ ನಂತರ ಅಗತ್ಯವಾದ ರನ್ ವೇಗ ಹೆಚ್ಚಲಿಲ್ಲ. ಇನ್ನುಳಿದಂತೆ ಏಡನ್ ಮಾರ್ಕ್ರಮ್ 31, ಹೈನ್‌ರಿಕ್ ಕ್ಲಾಸೀನ್ 3, ವಿಯಾನ್ ಮಲ್ಡರ್ 8, ಮಾರ್ಕೊ ಯಾನ್ಸೆನ್ 3, ಕೇಶವ್ ಮಹಾರಾಜ್ 1 ಕಗಿಸೊ ರಬಾಡಾ 16, ಲುಂಗಿ ಎನ್‌ಗಿಡಿ ಅಜೇಯ 1 ಹಾಗೂ ಡೇವಿಡ್ ಮಿಲ್ಲರ್ ಅಜೇಯ 100 ರನ್ ಗಳಿಸಿದರು. ಹೀಗೆ ಡೇವಿಡ್ ಮಿಲ್ಲರ್ ಹೊರತುಪಡಿಸಿ ಉಳಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ನಿಲ್ಲದ ಕಾರಣ ಆಫ್ರಿಕಾ ಸೋಲಿನತ್ತ ಸಾಗಿತು.
ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ 3 ವಿಕೆಟ್, ಗ್ಲೆನ್ ಫಿಲಿಪ್ಸ್ ಹಾಗೂ ಮ್ಯಾಟ್ ಹೆನ್ರಿ ತಲಾ ಎರಡೆರಡು ವಿಕೆಟ್, ಮೈಕೆಲ್ ಬ್ರೇಸ್‌ವೆಲ್ ಹಾಗೂ ರಚಿನ್ ರವೀಂದ್ರ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


