ಏಪ್ರಿಲ್ 18ರಂದು ಕಾಲೇಜು ಆವರಣದಲ್ಲಿ 23 ವರ್ಷದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಫಯಾಜ್‌ನ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಆರೋಪಿ ಪರ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿಯ ವಿಚಾರಣೆ ಕಳೆದ ಜೂನ್ 10ರಿಂದ ಆರಂಭವಾಗಿದ್ದವು.
ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ನ್ಯಾಯಾಧೀಶೆ ಪಲ್ಲವಿ ಬಿ.ಆರ್. ಸೋಮವಾರ ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದರು.
ಕಳೆದ 1 ವರ್ಷ 4 ತಿಂಗಳಿನಿಂದ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಫಯಾಜ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದು ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಲಾಗಿದೆ. ನೇಹಾ ಹಿರೇಮಠ ತಾಯಿ ಪರ ಸರ್ಕಾರಿ ವಿಶೇಷ ಅಭಿಯೋಜಕ ಮಹೇಶ ವೈದ್ಯ ಮತ್ತು ರಾಘವೇಂದ್ರ ಮತಗೀಕರ ಹಾಗೂ ಆರೋಪಿ ಫಯಾಜ್ ಪರ ಝಡ್.ಎಂ. ಹತ್ತರಕಿ ವಾದ ಮಂಡಿಸಿದ್ದರು.
ನನ್ನ ಮಗಳ ಜೀವ ತೆಗೆದ ವ್ಯಕ್ತಿಗೆ ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದಾರೆ. ಇದು ನಮ್ಮ ಮೊದಲ ಗೆಲುವು ಎಂದು ಹಿರೇಮಠ್ ತಿಳಿಸಿದ್ದಾರೆ. ಆರೋಪಿಗೆ ಮರಣದಂಡನೆ ಶಿಕ್ಷೆಯಾಗುವವರೆಗೂ ತನ್ನ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್ನ ಆದೇಶವನ್ನು ನೇಹಾ ಹಿರೇಮಠ ಕುಟುಂಬಸ್ಥರು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸರ್ಕಾರಿ ವಿಶೇಷ ಅಭಿಯೋಜಕ ಮಹೇಶ ವೈದ್ಯ, ‘ಜಾಮೀನು ಅರ್ಜಿ ಸಂಬಂಧಿಸಿ ನ್ಯಾಯಾಲಯ ಎರಡೂ ಕಡೆ ವಾದ ಆಲಿಸಿತ್ತು. ಆರೋಪಿ ಪರ ವಾದ ಮಂಡಿಸಿದ್ದ ವಕೀಲರು, ಬಂಧನ ಪ್ರಕ್ರಿಯೆ ಸರಿಯಾಗಿಲ್ಲ. ಪೋಷಕರಿಗೆ ಮಾಹಿತಿ ನೀಡದೆ ಬಂಧಿಸಲಾಗಿದೆ ಎಂದು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಯಾಕೆ ಬಂಧಿಸಿದ್ದು ಎನ್ನುವ ಕುರಿತು ನಾವು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದೆವು’ ಎಂದರು.
,ಇಸಿಜಿ ಪರೀಕ್ಷೆ: ಹೃದಯದ ಆರೋಗ್ಯವನ್ನು ಪರೀಕ್ಷಿಸಲು ಪ್ರಮುಖ, ಸುಲಭ ಮತ್ತು ಸುರಕ್ಷಿತ ವಿಧಾನ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


