‘ಸನಾತನ ಸಂತ ನಿಯೋಗ’ ಬ್ಯಾನರ್ ಅಡಿಯಲ್ಲಿ ಕರ್ನಾಟಕದ ವಿವಿಧ ಮಠಗಳ ಮಠಾಧೀಶರು ಬುಧವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಧರ್ಮಸ್ಥಳ ಪ್ರಕರಣದ ಎಲ್ಲಾ ಬೆಳವಣಿಗೆಗಳನ್ನ ನಾನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಧರ್ಮಸ್ಥಳ ಪ್ರಕರಣ ಬಗ್ಗೆ ಕ್ಯಾಬಿನೆಟ್ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಧರ್ಮ ರಕ್ಷಣೆಗೆ ಸರಕಾರ ಬದ್ಧವಾಗಿದ್ದು, ಕೆಲ ಹೊಸ ಕಾನೂನು ಜಾರಿಗೆ ತರುವ ಬಗ್ಗೆ ಸಚಿವರು ಒಲವು ತೋರಿದ್ದಾರೆ. ಇನ್ನೂ ಧರ್ಮಸ್ಥಳ ಪ್ರಕರಣದ ಕುರಿತು ಎರಡು ವರದಿಗಳು ರಾಜ್ಯ ಸರಕಾರದಿಂದ ತರಿಸಿಕೊಂಡಿದ್ದೇವೆ. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದಾರೆ ಎಂದು ವರೂರಿನ ನವಗ್ರಹ ತೀರ್ಥದ ಶ್ರೀ ಗುಣಧರನಂದಿ ಮಹಾರಾಜ ತಿಳಿಸಿದರು.
ಧರ್ಮಸ್ಥಳ ಕ್ಷೇತ್ರದ ಮೇಲೆ ಹಲವು ಷಡ್ಯಂತ್ರ ರೂಪಿಸಿರುವುದು ಬಹಿರಂಗವಾಗಿದೆ. ಅಲ್ಲಿನ ವಾತಾವರಣವನ್ನು ಅಶುದ್ದಿಗೊಳಿಸಿದ್ದಾರೆ. ಹೀಗಾಗಿ ರಾಜ್ಯದ ಎಲ್ಲಾ ತಾಲೂಕುಗಳಿಂದ ಸಾಧು ಸಂತರು ಸೆ.10 ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮೀಜಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಧಾರ್ಮಿಕ ರಕ್ಷಣೆಗಾಗಿ ಕೇಂದ್ರ ಸರಕಾರ ಕಡಕ್ ಕಾನೂನು ತರಬೇಕು ಎಂದು ಗುಣಧರ ನಂದಿ ಮಹಾರಾಜರು ಒತ್ತಾಯಿಸಿದ್ದಾರೆ.
ಸಾಧು-ಸಂತರ ದೆಹಲಿ ಭೇಟಿಯ ನಂತರ ಈಗ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶೀಘ್ರದಲ್ಲೇ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ. ಸೆಪ್ಟೆಂಬರ್ 8ರಂದು ನಿಗದಿಯಾಗಿರುವ ಈ ಭೇಟಿ ಸಂದರ್ಭದಲ್ಲಿ, ಹೆಗ್ಗಡೆ ಅವರು ಧರ್ಮಸ್ಥಳದ ವಿರುದ್ಧ ಹರಿದಾಡುತ್ತಿರುವ ಅಪಪ್ರಚಾರ, ಜನರ ಅನುಮಾನಗಳು ಹಾಗೂ ಧಾರ್ಮಿಕ ಭಾವನೆಗಳ ಕುರಿತಂತೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾತನಾಡಿದ ಜೈನ ಮುನಿ ಗುಣಧರನಂದಿ ಮಹಾರಾಜ ಅವರು, ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದ ಪ್ರತಿಷ್ಠೆಯನ್ನು ಕಾಯ್ದುಕೊಳ್ಳಲು ಹಾಗೂ ಸತ್ಯಾಂಶವನ್ನು ಸ್ಪಷ್ಟಪಡಿಸಲು ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


