ಸೆಪ್ಟೆಂಬರ್‌ನಲ್ಲಿ ಸಿ.ಪಿ.ರಾಧಾಕೃಷ್ಣನ್ ಭಾರತದ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅವರು ಕರ್ನಾಟಕದ ಪ್ರವಾಸ ಕೈಗೊಂಡಿದ್ದಾರೆ. ನವೆಂಬರ್ 9ರಂದು ಅವರು ರಾಜ್ಯಕ್ಕೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಾಸನ ಜಿಲ್ಲೆಯ ಶ್ರವಣಬೆಳಗೊಳಕ್ಕೆ ನವೆಂಬರ್ 9ರಂದು ಉಪ ರಾಷ್ಟ್ರಪತಿಗಳು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಿದ್ಧತೆ ಕುರಿತು ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಉಪ ರಾಷ್ಟ್ರಪತಿಗಳ ಕಾರ್ಯಕ್ರಮದ ಕುರಿತು ಶ್ರವಣಬೆಳಗೊಳದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಧಿಕಾರಿಗಳು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಡಿಕೊಂಡಿರುವ ತಯಾರಿ ಬಗ್ಗೆ ವರದಿ ನೀಡುವಂತೆಯೂ ಡಿಸಿ ಸೂಚಿಸಿದ್ದಾರೆ.
ಮಾರ್ಗಸೂಚಿಯಂತೆ ವೇದಿಕೆ ಮೇಲೆ ಎಲ್ಲಾ ಕುರ್ಚಿಗಳು ಒಂದೇ ರೀತಿ ಇರಬೇಕು. ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸಿ ಎಂದು ಸೂಚಿಸಿದರು. ಎಸ್ಕಾರ್ಟ್ ವಾಹನಗಳ ಸಂಖ್ಯೆ, ಯಾವ ಮಾದರಿ ವಾಹನ ಹಾಗೂ ವಾಹನ ಚಾಲಕರ ಮೊಬೈಲ್ ನಂಬರ್ ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಿರಂತರವಾಗಿ ವಿದ್ಯುತ್ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು. ರಸ್ತೆಗಳ ಅಕ್ಕಪಕ್ಕದಲ್ಲಿ ಸ್ವಚ್ಚತೆಗೆ ಕ್ರಮವಹಿಸಬೇಕು, ಕಾರ್ಯಕ್ರಮದ ದಿನದಂದು ತಾತ್ಕಾಲಿಕವಾಗಿ ಮಟನ್, ಚಿಕನ್ ಅಂಗಡಿಗಳ ಮುಚ್ಚಲು ಕ್ರಮವಹಿಸಬೇಕು, ಬೀದಿ ನಾಯಿಗಳ ಹಾವಳಿ ತಡೆಗೆ ಕೂಡ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಉಪ ರಾಷ್ಟ್ರಪತಿಗಳ ಬೆಂಗಾವಲು ವಾಹನವಾಗಿ ಸುಸ್ಸಜ್ಜಿತ ಅಂಬುಲೆನ್ಸ್ ಜೊತೆ ನುರಿತ ಆರೋಗ್ಯ ಸಿಬ್ಬಂದಿ ಇರಬೇಕು. ಸಾರ್ವಜನಿಕರಿಗೂ ಕೂಡ ಒಂದು ಅಂಬುಲೆನ್ಸ್ ಪ್ರತ್ಯೇಕವಾಗಿರಬೇಕು, ಆಹಾರ ಸುರಕ್ಷತೆ ಕುರಿತು ಪರಿಶೀಲಿಸಬೇಕು ಎಂದು ಡಿಸಿ ಹೇಳಿದರು.
ಸ್ಥಳ ಪರಿಶೀಲನೆ: ಜಿಲ್ಲಾಧಿಕಾರಿಗಳು ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಹೆಲಿಪ್ಯಾಡ್‌ಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಮಠಕ್ಕೆ ಆಗಮಿಸಿ ಸ್ವತ್ತಿಶ್ರೀ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕಾರ್ಯಕ್ರಮ ಕುರಿತು ಚರ್ಚಿಸಿದರು.
ಸ್ವಾಮೀಜಿಗಳು ಮಾತನಾಡಿ, ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಚರಣ ಪಾದುಕೆ ಸ್ಥಾಪನೆ ಹಾಗೂ ಬೆಟ್ಟಕ್ಕೆ ಪದನಾಮ ಅನಾವರಣ ಮತ್ತು ಶಾಂತಿ ಸಾಗರ ಮಹಾರಾಜರ ಜೀವನ ಚರಿತ್ರೆಯರ ಬೃಹತ್ ಶಿಲಾಶಾಸನ ಲೋಕಾರ್ಪಾಣೆ ಆಗಲಿದೆ ಎಂದು ಕಾರ್ಯಕ್ರಮದ ಮಾಹಿತಿ ನೀಡಿದರು.
ಶ್ರವಣಬೆಳಗೊಳಕ್ಕೆ ಶಾಂತಿ ಸಾಗರ ಮಹಾರಾಜರು ಬಂದು 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ವಾಮಿಜಿ ಅವರ ನೆನಪಿಗಾಗಿ ಬೆಟ್ಟಕ್ಕೆ ಹೆಸರಿಡುವ ಕೆಲಸ ಮಾಡಲಾಗುತ್ತಿದೆ. ಏಪ್ರಿಲ್ 24ಕ್ಕೆ ಚಂದ್ರಗಿರಿ ಮಹೋತ್ಸವ ನಡೆಯಲಿದೆ. ಆಗ ರಾಷ್ಟ್ರಪತಿಗಳು ಆಗಮಿಸುತ್ತಾರೆ. ಆ ಸಂದರ್ಭದಲ್ಲಿಯೇ 2030ರಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕದ ದಿನಾಂಕ ಘೋಷಣೆ ಮಾಡಲಾಗುವುದು ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


