ಧಾರವಾಡ: ಬಸವಣ್ಣ ಇರುವ ಅನುಭವ ಮಂಟಪ ಇವತ್ತು ಅನುಭವ ಮಂಟಪ ಆಗಿ ಉಳಿದಿಲ್ಲ. ಅಲ್ಲಿ ಪೀರ್ ಭಾಷಾ ಅವರ ಒಂದು ಪೀರ್ ನಡೆಯುತ್ತಿದೆ. ಈ ಸರ್ಕಾರ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದೇ ಒಂದು ರೂ ಹಣ ಬಿಡುಗಡೆ ಮಾಡಿಲ್ಲ. ಅದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಚಕಾರ ಎತ್ತಿಲ್ಲ ಎಂದು ಅರವಿಂದ್ ಬೆಲ್ಲದ್ ಕಿಡಿಕಾರಿದ್ದಾರೆ.
ಈ ಬಗ್ಗೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ಯಾಮನೂರು ಶಿವಶಂಕರಪ್ಪ ಅವರು, ಯತ್ನಾಳ್ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಯತ್ನಾಳ್ ಬಗ್ಗೆ ಶ್ಯಾಮನೂರು ಅವರ ಬಾಯಲ್ಲಿ ಆ ರೀತಿಯ ಪದ ಬರಬಾರದು. ಅದು ಅವರಿಗೆ ಶೋಭೆ ತರುವುದಿಲ್ಲ. ಒಣ ಬಾವಿಯಲ್ಲಿ ದೂಡಬೇಕು ಎಂದರೆ ಏನು? ಯತ್ನಾಳ್ ಅವರು ಹೇಳಿದ್ದು ಸರಿ ಇದೆ. ಶ್ಯಾಮನೂರು ಅವರು ಬಸವ ಕಲ್ಯಾಣದಲ್ಲಿ ಏನು ಮಾಡಿದ್ದಾರೆ? ಅವರಿಗೆ ವಯಸ್ಸಾಗಿದೆ. ಅವರು ಮನೆಯಲ್ಲಿ ಕುಳಿತುಕೊಳ್ಳೋದು ಒಳ್ಳೆಯರು. ಈ ರೀತಿ ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಯತ್ನಾಳ್ ಹಾಗೂ ವಿಜಯೇಂದ್ರ ತಂಡದ ಮಧ್ಯೆ ಹೈಕಮಾಂಡ್ ಮಧ್ಯ ಪ್ರವೇಶಿಸಿರುವ ವಿಚಾರವಾಗಿ, ಪಕ್ಷದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ಪಕ್ಷದಲ್ಲಿ ಇದ್ದ ಗೊಂದಲ ಹೈಕಮಾಂಡ್ ಮಧ್ಯಸ್ಥಿಕೆಯಿಂದ ಶಾಂತವಾಗಿದೆ. ಈ ಮೂಲಕ ಲಕ್ಷಾಂತರ ಕಾರ್ಯಕರ್ತರಿಗೆ ಸಂತೋಷವಾಗಿದೆ. ಪಕ್ಷ ಎಂದ ಮೇಲೆ ಸ್ವಲ್ಪ ಭಿನ್ನಾಭಿಪ್ರಾಯ ಇರೋದು ಸಹಜ. ಈ ಭಿನ್ನಾಭಿಪ್ರಾಯ ಇತ್ಯರ್ಥ ಆಗುವ ಹಾದಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


