ಇಡ್ಲಿ, ನಾಟಿಕೋಳಿ ಸಾರು, ಉಪ್ಪಿಟ್ಟು, 2 ಬಾರಿ ಉಪಹಾರಕೂಟ ಏನು ಮುಗಿದರೂ ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಕುರಿತ ಗೊಂದಲ ಬಗೆಹರಿದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತರಿಗೆ ಹೈಕಮಾಂಡ್ ನೋಟಿಸ್ ನೀಡಿದ್ದು ಮತ್ತೆ ಚರ್ಚೆಗೆ ಕಾರಣವಾಗಿದೆ.
ಡಿಸೆಂಬರ್ 3ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಂಗಳೂರು ನಗರಕ್ಕೆ ಬಂದಿದ್ದರು. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಮಂಗಳಗಂಗೋತ್ರಿಯಲ್ಲಿ ನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿವಿ ಆಯೋಜಿಸಿದ್ದ ‘ಶತಮಾನದ ಪ್ರಸ್ತಾನ ನಾರಾಯಣಗುರು – ಮಹಾತ್ಮಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಮತ್ತು ಶ್ರೀ ಗುರುವಿನ ಮಹಾಸಮಾಧಿ ಶತಾಬ್ದಿ, ಸರ್ವಮತ ಸಮ್ಮೇಳನ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆದರೆ ಅವರು ಕೇರಳದಿಂದ ಮಂಗಳೂರು ನಗರಕ್ಕೆ ಬಂದಾಗ ಕಾಂಗ್ರೆಸ್ ನಾಯಕರು ಹೈಡ್ರಾಮ ಮಾಡಿದ್ದರು. ಕೆ.ಸಿ.ವೇಣುಗೋಪಾಲ್ ಮುಂದೆಯೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪರವಾಗಿ ಘೋಷಣೆಗಳನ್ನು ಕೂಗಿ ಗೊಂದಲ ಸೃಷ್ಟಿ ಮಾಡಲಾಗಿತ್ತು. ಅದಕ್ಕೆ ಈಗ ನೋಟಿಸ್ ನೀಡಲಾಗಿದೆ.
ಯಾರು, ಯಾರಿಗೆ ನೋಟಿಸ್?: ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಸಿದ್ದರಾಮಯ್ಯ ಆಪ್ತರಾದ ಐವಾನ್ ಡಿಸೋಜಾ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ ಮಿಥುನ್ ರೈಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಕೆ.ಸಿ.ವೇಣುಗೋಪಾಲ್ ಆಗಮಿಸಿದ್ದಾಗ ಐವಾನ್ ಡಿಸೋಜಾ ಬೆಂಬಲಿಗರ ಜೊತೆ ಸೇರಿ ಪೂರ್ಣಾವಧಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈ ಎಂಬ ಘೋಷಣೆ ಕೂಗಿದ್ದರು. ಮಿಥುನ್ ರೈ ಡಿ.ಕೆ.ಶಿವಕುಮಾರ್ ಪರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಪಕ್ಷದ ನಾಯಕರಲ್ಲಿ ಗೊಂದಲ ಮೂಡಿಸಿದ್ದರು.
ಆದ್ದರಿಂದ ಉಭಯ ನಾಯಕರು ಸೂಕ್ತ ಕಾರಣಗಳ ಜೊತೆ ವಿವರಣೆ ನೀಡಬೇಕು ಎಂದು ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಈ ಮೂಲಕ ದಕ್ಷಿಣ ಕನ್ನಡದ ಇಬ್ಬರು ನಾಯಕರಿಗೆ ಹೈಕಮಾಂಡ್ ಬಿಸಿ ಮುಟ್ಟಿಸಿದೆ.
ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎರಡು ಬಾರಿ ಉಪಹಾರಕೂಟ ಮಾಡಿದ್ದರು. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಇಬ್ಬರೂ ಘೋಷಣೆ ಮಾಡಿದ್ದರು. ಆದರೆ ಅವರ ಬೆಂಬಲಿಗರು ಮಾತ್ರ ಘೋಷಣೆಗಳನ್ನು ಕೂಗುವ ಮೂಲಕ ಪತ್ತೆ ಪಕ್ಷದಲ್ಲಿ ಗೊಂದಲ ಉಂಟು ಮಾಡಲು ಪ್ರಯತ್ನ ನಡೆಸಿದ್ದರು.
ಆದ್ದರಿಂದ ಐವಾನ್ ಡಿಸೋಜಾ ಮತ್ತು ಮಿಥುನ್ ರೈಗೆ ನೋಟಿಸ್ ನೀಡಿ, ಕಾರಣವನ್ನು ಕೇಳಲಾಗಿದೆ. ಈ ಮೂಲಕ ಕಾರ್ಯಕರ್ತರು, ಅಭಿಮಾನಿಗಳು ನಾಯಕರ ಸಮ್ಮುಖದಲ್ಲಿ ಘೋಷಣೆ ಕೂಗುವಾಗ ಎಚ್ಚರಿಕೆ ಇಂದ ಇರಬೇಕು ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ.
ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಉಪಹಾರ ಸೇವಿಸಿದ ಬಳಿಕ ಸಿದ್ದರಾಮಯ್ಯ ಮಾತನಾಡಿ, “ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಿನಿಂದ ಇದ್ದೇವೆ. ಸಿಎಲ್.ಪಿ ಸಭೆ ಕರೆದಾಗ ಪಕ್ಷದ ಎಲ್ಲಾ ಶಾಸಕರೂ ಒಟ್ಟಿಗೆ ಊಟಕ್ಕೆ ಸೇರುತ್ತೇವೆ. ನಾನು ಹಾಗೂ ಉಪಮುಖ್ಯಮಂತ್ರಿಗಳು ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದೇವೆ. ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ. 2028ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ” ಎಂದು ಹೇಳಿದ್ದರು.
ಡಿಸಿಎಂ ಡಿ.ಕೆ.ಶಿವಕುಮಾರ್, ‘ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಕೇಳುತ್ತೇವೆ. ರಾಜಕೀಯವಾಗಿ ನಮ್ಮಿಬ್ಬರದ್ದೂ ಒಂದೇ ತೀರ್ಮಾನ. ಹೈಕಮಾಂಡ್ ಹೇಳಿದಂತೆ ಹಿಂದೆಯೂ ಕೆಲಸ ಮಾಡಿಕೊಂಡು ಬಂದಿದ್ದೇವೆ, ಮುಂದೆಯೂ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ, ಇರೋದು ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು. ಗುಂಪುಗಾರಿಕೆಗೆ ಹಿಂದೆಯೂ ಅವಕಾಶ ಕೊಡಲಿಲ್ಲ, ಈಗಲೂ ಕೊಡಲ್ಲ, ಅದರ ಅವಶ್ಯಕತೆಯೂ ಇಲ್ಲ” ಎಂದು ತಿಳಿಸಿದ್ದರು.
“ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಅದು ನಮ್ಮ ಕರ್ತವ್ಯ. ಪ್ರತಿಯೊಬ್ಬ ಶಾಸಕರನ್ನು, ಕಾರ್ಯಕರ್ತರನ್ನು ಮತ್ತು ನಮ್ಮ ಪಕ್ಷವನ್ನು ಶಕ್ತಿಶಾಲಿಯಾಗಿ ಬೆಳೆಸಬೇಕು. ಅದೂ ನಮ್ಮಿಬ್ಬರ ಕರ್ತವ್ಯ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. 2028ಕ್ಕೆ ಮತ್ತೆ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರಲು ಹಲವು ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ” ಎಂದು ಹೇಳಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


