ಬೆಂಗಳೂರು: ಧರ್ಮಸ್ಥಳದಲ್ಲಿ ದಶಕದ ಹಿಂದೆ ಅತ್ಯಾಚಾರ ಹಾಗೂ ಕೊಲೆಯಾಗಿದ್ದ ಸೌಜನ್ಯ ಪ್ರಕರಣ ಇನ್ನೂ ಸಹ ಬಗೆಹರಿದಿಲ್ಲ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದ ಈ ಪ್ರಕರಣ ಮೊನ್ನೆ ಮೊನ್ನೆಯಷ್ಟೇ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೊನಿಂದಾಗಿ ಇದೀಗ ಬೃಹತ್ ಮಟ್ಟದಲ್ಲಿ ವೈರಲ್ ಆಗಿದೆ.
ಈ ವಿಡಿಯೊದಲ್ಲಿ ಸೌಜನ್ಯ ಕಾಲೇಜಿನಿಂದ ಹಿಂದಿರುಗುವುದರಿಂದ ಹಿಡಿದು ಅಂತಿಮವಾಗಿ ಎಂತಹ ಕ್ರೂರ ಸ್ಥಿತಿಯಲ್ಲಿ ಶವ ಪತ್ತೆಯಾಯಿತು, ಶವ ದೊರಕಿದ ಬಳಿಕ ಪ್ರಕರಣ ಯಾವ ರೀತಿ ದಿಕ್ಕು ತಪ್ಪಿತು ಎಂಬುದನ್ನು ತಿಳಿಸಿದರು. ಅಲ್ಲದೇ ಪ್ರಕರಣದಲ್ಲಿ ಪಿಎಸ್‌ಐ ಯೋಗೇಶ್ ಅಕ್ರಮ ಎಸಗಿ ಪ್ರಕರಣ ಹಳ್ಳ ಹಿಡಿಯುವಂತೆ ಮಾಡಿದರು ಎಂದೂ ಸಹ ಆರೋಪಿಸಿದರು.
ಇನ್ನು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಾಲಯ ಹಿಂದೂ ದೇವಾಲಯವಲ್ಲ ಅದೊಂದು ಜೈನ ದೇವಾಲಯ ಎಂದೂ ಸಹ ವಿಡಿಯೊದಲ್ಲಿ ಉಲ್ಲೇಖಿಸಿದ್ದ ಸಮೀರ್ ಭಕ್ತರು ಹಾಗೂ ಹಿಂದೂ ಧರ್ಮ ಪ್ರಿಯರ ಕೆಂಗಣ್ಣಿಗೆ ಗುರಿಯಾದರು.
ಹೀಗೆ ನೋಡ ನೋಡುತ್ತಿದ್ದಂತೆ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ವಿವಾದದ ರೂಪವನ್ನೂ ಸಹ ಪಡೆದುಕೊಂಡಿತು. ಯಾವಾಗ ಈ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿತೋ ಎಡಿಜಿಪಿ ಎಲ್ಲಾ ಪೊಲೀಸ್ ಆಯುಕ್ತರಿಗೆ ಹಾಗೂ ವಲಯ ಪೊಲೀಸ್ ಅಧೀಕ್ಷಕರಿಗೆ ಈ ಕುರಿತು ಕಣ್ಣಿಡುವಂತೆ ಪತ್ರದ ಮೂಲಕ ಸೂಚಿಸಿದರು ಹಾಗೂ ಈ ಕುರಿತು ಗಮನಕ್ಕೆ ತರದ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಘಟಕಾಧಿಕಾರಿಗಳು ವಿಫಲರಾಗಿದ್ದಾರೆ ಎಂದೂ ಸಹ ಪತ್ರದಲ್ಲಿ ಉಲ್ಲೇಖಿಸಿದ್ದರು.
ಅಲ್ಲದೇ ಅತ್ತ ಬಳ್ಳಾರಿ ಜಿಲ್ಲೆಯ ಕೌಲ್‌ಬಝಾರ್ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡಿದ್ದರು. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಮೇಲೆ ಧಾರ್ಮಿಕ ಭಾವನೆ ಹೊಂದಿರುವ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತಹ ವಿಡಿಯೊ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಸೌಜನ್ಯ ಪ್ರಕರಣದಲ್ಲಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿರುವ ಗಿರೀಶ್ ಮಟ್ಟಣವರ್ ಪೊಲೀಸ್ ನೋಟಿಸ್ ಹಾಗೂ ಎಫ್‌ಐಆರ್ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ‘ಸಮೀರ್‌ಗೆ ಬಿಗ್ ರಿಲೀಫ್, ಬಂಧಿಸುವ ಹಾಗಿಲ್ಲ. ಪೊಲೀಸ್ ಠಾಣೆಗೂ ಕರೆಸುವ ಹಾಗಿಲ್ಲ. ಕಾನೂನು ಉಲ್ಲಂಘಿಸಿ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಪೊಲೀಸರಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ’ ಎಂದು ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


