ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಈ ಹಿಂದಿನ ಹಳೆಯ ಪಿಂಚಣಿ ಯೋಜನೆ (OPS)ಯನ್ನು ಮರು ಜಾರಿಗೊಳಿಸುವುದು. ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ಕುರಿತು ಭರವಸೆ ನೀಡಿತ್ತು. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಕಳೆದಿದೆ. ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆ ಯಾವಾಗ?.
ರಾಜ್ಯ ಸರ್ಕಾರಿ ನೌಕರರ ಸಂಘ ಎನ್‌ಪಿಎಸ್ ಟು ಒಪಿಎಸ್ ಕುರಿತು ಅಪ್‌ಡೇಟ್ ನೀಡಿದೆ. ಈ ಕುರಿತು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಈ ಮೂಲಕ ಸರ್ಕಾರಿ ನೌಕರರಿಗೆ ಶೀಘ್ರವೇ ಗುಡ್‌ನ್ಯೂಸ್ ಸಿಗಲಿದೆ.
ಪ್ರಕಟಣೆಯ ಮಾಹಿತಿ: ಸಿ.ಎಸ್.ಪಡಾಕ್ಷರಿ ಅವರು ಪ್ರಕಟಣೆಯಲ್ಲಿ ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿಗೊಳಿಸುವ ಸಂಬಂಧ ಸರ್ಕಾರ ರಚಿಸಲಾಗಿದ್ದ ಸಮಿತಿಯಿಂದ ವಾರಾಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಎಂದು ಹೇಳಿದ್ದಾರೆ.
ಕರ್ನಾಟ ರಾಜ್ಯ ಸರ್ಕಾರಿ ನೌಕರರಿಗೆ 2006 ರಿಂದ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆಯನ್ನು (NPS) ಹೋಗಲಾಡಿಸಿ ಈ ಹಿಂದಿನ ಹಳೆಯ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸುವ ಸಂಬಂಧ, OPS ಯೋಜನೆ ಜಾರಿಗೊಳಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರವು ಸಮಿತಿಯನ್ನು ರಚಿಸಿತ್ತು. ಈ ಸಂಬಂಧ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸುವಂತೆ ಸಂಘವು ಸಮಿತಿಯನ್ನು ಒತ್ತಾಯಿಸುತ್ತಲೇ ಬಂದಿತ್ತು.
ದಿನಾಂಕ 03-12-2025ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ಹಾಗೂ ಪದಾಧಿಕಾರಿಗಳ ನಿಯೋಗವು NPS ಸಮಿತಿಯ ಸದಸ್ಯರು ಹಾಗೂ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಎಂ.ಟಿ. ರೇಜುರವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಂದರ್ಭದಲ್ಲಿ ಇಡೀ ರಾಜ್ಯದ ನೌಕರರು NPS ರದ್ದುಪಡಿಸುವ ಸಂಬಂಧ ಒತ್ತಡ ಹಾಕುತ್ತಿದ್ದಾರೆ ಎಂಬ ಅಂಶವನ್ನೂ ಗಮನಕ್ಕೆ ತರಲಾಯಿತು.
ಸಮಿತಿಯು ಈಗಾಗಲೇ ವರದಿಯನ್ನು ಸಿದ್ಧಪಡಿಸಿದ್ದು, ಈ ಸಂಬಂಧ ಒಂದು ವಾರದೊಳಗೆ ಸಮಿತಿಯ ಸಭೆಯನ್ನು ಏರ್ಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದಾಗಿ ತಿಳಿಸಿರುತ್ತಾರೆ. NPS ಸಮಿತಿಯು ನೀಡಲಿರುವ ವರದಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಪರಾಮರ್ಶಿಸಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಲಾಗಿದ್ದ ಘೋಷಣೆ ಹಾಗೂ ಸಂಘದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಮಿತಿ ವರದಿ ನೀಡಿದ ಕೊಡಲೇ ಕ್ರಮವಹಿಸುವುದಾಗಿ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರಿ ನೌಕರರಿಗೆ ಈ ಹಿಂದಿನಂತ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರು ಜಾರಿಗೊಳಿಸುವಂತೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಸಂಘವು ಮತ್ತೊಮ್ಮೆ ಮನವಿ ಮಾಡುತ್ತದೆ.
ಹಳೆ ಪಿಂಚಣಿ ಯೋಜನೆ: ಹಲವು ರಾಜ್ಯಗಳಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಈ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂಬ ಒತ್ತಾಯವಿದೆ. ಅಲ್ಲದೇ ಕೇಂದ್ರ ಸರ್ಕಾರಿ ನೌಕರರು ಸಹ ಹೊಸ ಪಿಂಚಣಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
ಆದ್ದರಿಂದ ಕೇಂದ್ರ ಸರ್ಕಾರ ಹೊಸದಾಗಿ ಏಕೀಕೃತ ಪಿಂಚಣಿ ಯೋಜನೆಯನ್ನು ಘೋಷಣೆ ಮಾಡಿತ್ತು. 2025ರ ಏಪ್ರಿಲ್ 1 ರಿಂದ ಈ ಯೋಜನೆ ಜಾರಿಗೆ ಬಂದಿದೆ. ಇದು ಹಳೆಯ ಪಿಂಚಣಿ ಯೋಜನೆ ಹಾಗೂ ಹೊಸ ಪಿಂಚಣಿ ಯೋಜನೆಗಿಂತ ಭಿನ್ನವಾಗಿದೆ.
ರಾಜಸ್ಥಾನ, ಛತ್ತೀಸಗಡ, ಜಾರ್ಖಂಡ್ ರಾಜ್ಯಗಳು ಎನ್‌ಪಿಎಸ್ ರದ್ದು ಮಾಡಿವೆ. ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವು ಎನ್‌ಪಿಎಸ್ ರದ್ದು ಮಾಡಬೇಕು ಎಂಬುದು ಸರ್ಕಾರಿ ನೌಕರರ ಬೇಡಿಕೆಯಾಗಿತ್ತು. ಆದ್ದರಿಂದ ಸರ್ಕಾರ ಈ ಕುರಿತು ವರದಿ ನೀಡಲು ಸಮಿತಿ ರಚನೆ ಮಾಡಿತ್ತು.
ಎನ್‌ಪಿಎಸ್‌ನಿಂದ ಒಪಿಎಸ್‌ಗೆ ಬದಲಾವಣೆಯಾದರೆ 2006ರ ಬಳಿಕ ಎನ್‌ಪಿಎಸ್‌ಗೆ ಕಟ್ಟಿದ ಹಣ ವಾಪಸ್ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರುವ ಕುರಿತು ಕೇಂದ್ರ, ರಾಜ್ಯ ಸರ್ಕಾರಗಳ ನಡುವೆ ಗೊಂದಲಗಳಿವೆ. ಆದ್ದರಿಂದ ಸರ್ಕಾರ ಇಂತಹ ತಾಂತ್ರಿಕ ಅಂಶಗಳನ್ನು ಪರಿಗಣನೆ ಮಾಡಿಕೊಂಡು ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿ ಕುರಿತು ತೀರ್ಮಾನವನ್ನು ಕೈಗೊಳ್ಳಬೇಕಾಗುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


