ಬೆಂಗಳೂರು: ಡಿಕೆ ಶಿವಕುಮಾರ್ ಬದಲು ಬೇರೊಬ್ಬರು ಕರ್ನಾಟಕ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಚರ್ಚೆಯ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾರು ಬೇಕಾದರೂ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಲಿ ತಿರುಗೇಟು ನೀಡಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಎಂಬ ಸೂತ್ರದನುಸಾರ ಕೆಲವರು ಡಿ.ಕೆ.ಶಿವಕುಮಾರ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಗಬೇಕು ಎಂಬ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದಕ್ಕೆ ತಿರುಗೇಟು ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ನಿರ್ಧಾರ ಮಾಡುತ್ತಾರೆ. ಪರಮೇಶ್ವರ್, ಕೆ.ಎನ್.ರಾಜಣ್ಣ ಅಷ್ಟೇ ಏಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅಧ್ಯಕ್ಷರಾಗಬಹುದು. ರಾಜ್ಯದ ಜನರ ಸಂಕಷ್ಟವನ್ನು ಪರಿಹರಿಸುವವರು, ಪಕ್ಷವನ್ನು ಸಮರ್ಥವಾಗಿ ನಡೆಸುವವರು ಅಧ್ಯಕ್ಷರಾಗಲಿ ಎಂದರು.
ಇಂತಹ ವಿಚಾರಗಳಲ್ಲಿ ಹೇಳಿಕೆ ನೀಡುವುದು ಪಕ್ಷದ ಹೈಕಮಾಂಡ್ ಅನ್ನು ಪ್ರಶ್ನಿಸಿದಂತಾಗುತ್ತದೆ. ಹಾಗಾಗಿ ತಾವು ಈ ಬಗ್ಗೆ ಹೆಚ್ಚು ಚರ್ಚೆ ನಡೆಸಲು ಬಯಸುವುದಿಲ್ಲ. ತಾವಂತೂ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದರು.
2028ಕ್ಕೆ ಮುಖ್ಯಮಂತ್ರಿಯಾಗಲು ಸತೀಶ್ ಜಾರಕಿಹೊಳಿ ಸೇರಿದಂತೆ ಬಹಳಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ಅದು ತಪ್ಪಲ್ಲ. ಅದಕ್ಕೂ ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಈಗ 140 ಸ್ಥಾನಗಳನ್ನು ಗೆಲ್ಲಿಸಲು ಸಾಕಷ್ಟು ಕಷ್ಟ ಪಟ್ಟೆವು ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.
ಪರಮೇಶ್ವರ್ ಸೇರಿದಂತೆ ಹಲವಾರು ಸಚಿವರು ಔತಣಕೂಟದ ಸಭೆಗಳನ್ನು ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಇದು ತಪ್ಪಲ್ಲ. ಎಲ್ಲರಿಗೂ ಅವರದೇ ಆದ ಬದ್ಧತೆಗಳಿರುತ್ತವೆ. ಸಮುದಾಯದ ಸಮಸ್ಯೆಗಳ ಚರ್ಚೆ ಅಗತ್ಯವಿರುತ್ತದೆ. ಹೀಗಾಗಿ ಸಭೆ ನಡೆಸುವುದನ್ನು ತಪ್ಪು ಎಂದು ಭಾವಿಸಬಾರದು ಎಂದು ತಿಳಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


