ಪಾಟ್ನಾ: ಕಳೆದೆರಡು ತಿಂಗಳುಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡುತ್ತಿರುವ ಮತಗಳ್ಳತನ ಆರೋಪದಿಂದ ಬಿಜೆಪಿಯ ಮೇಲೆ ಅನುಮಾನಗಳು ಹೆಚ್ಚಾಗುತ್ತಲೇ ಇದ್ದು, ಇದರ ನಡುವೆಯೇ ಬಿಹಾರ ವಿಧಾನಸಭಾ ಚುನಾವಣೆ ನಡೆದಿದೆ.
ನಿನ್ನೆ ( ನವೆಂಬರ್ 6 ) ಮೊದಲ ಹಂತದ ಚುನಾವಣೆ ನಡೆದಿದ್ದು, 121 ಕ್ಷೇತ್ರಗಳಲ್ಲಿ 64.46% ಮತದಾನ ನಡೆದಿದೆ.
ಇನ್ನು ಈ ಚುನಾವಣೆಯಲ್ಲಿಯೂ ಸಹ ಮತಗಳ್ಳತನ ನಡೆದಿದೆ ಎಂದು ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿವೆ. ಕೆಲವೆಡೆ ಮತದಾರರು ಮತಗಟ್ಟೆಗೆ ಆಗಮಿಸುವ ಮುನ್ನವೇ ಅವರ ಹೆಸರಿನಲ್ಲಿ ಬೇರೆ ಯಾರೋ ಮತದಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇನ್ನೂ ಕೆಲವೆಡೆ ದೆಹಲಿ ಚುನಾವಣೆಯಲ್ಲಿ ಮತ ಹಾಕಿದವರು ಇಲ್ಲಿಯೂ ಮತ ಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಹೀಗಿರುವಾಗಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಲೋಕ್ ಜನಶಕ್ತಿ ಪಾರ್ಟಿ ( ರಾಮ್ ವಿಲಾಸ್ ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸದೆಯಾಗಿರುವ ಶಾಂಭವಿ ಚೌಧರಿ ತಮ್ಮ ಕುಟುಂಬ ಸಮೇತ ಮತಗಟ್ಟೆಗೆ ಬಂದು ಮತ ಹಾಕಿ ಬಳಿಕ ಮಾಧ್ಯಮಕ್ಕೆ ಪೋಸ್ ಕೊಟ್ಟಿದ್ದಾರೆ.
ಈ ವೇಳೆ ಮೊದಲಿಗೆ ಬಲಗೈನ ತೋರು ಬೆರಳು ತೋರಿದ ಶಾಂಭವಿ ಚೌಧರಿಗೆ ಪಕ್ಕದಲ್ಲಿಯೇ ಇದ್ದ ಆಕೆಯ ತಾಯಿ ನೀತಾ ಚೌಧರಿ ಬಲಗೈ ಅಲ್ಲ ಎಡಗೈ ಎಂದು ಸನ್ನೆ ಮಾಡಿದ್ದಾರೆ. ಆ ಕೂಡಲೇ ಎಚ್ಚೆತ್ತುಕೊಂಡ ಶಾಂಭವಿ ಚೌಧರಿ ಬಲಗೈ ಕೆಳಗಿಳಿಸಿ ಎಡಗೈ ತೋರುಬೆರಳು ತೋರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಆದರೆ ಎರಡೂ ಕೈನ ಎರಡೂ ತೋರು ಬೆರಳುಗಳಿಗೂ ಮತದಾನದ ಇಂಕ್ ಬಳಿದಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎರಡೂ ಕೈಗೆ ಇಂಕ್ ಹಚ್ಚಲು ಹೇಗೆ ಸಾಧ್ಯ? ಇದು ಮತಗಳ್ಳತನದ ಭಾಗವೇ ಎಂದು ಪ್ರಶ್ನೆಗಳು ಕೇಳಿಬರುತ್ತಿವೆ.
ಇನ್ನು ಸಂಸದೆ ಶಾಂಭವಿ ಚೌಧರಿ ತನ್ನ ತಂದೆ ಜೆಡಿಯು ನಾಯಕ ಅಶೋಕ್ ಚೌಧರಿ ಹಾಗೂ ತಾಯಿ ನೀತಾ ಚೌಧರಿ ಜತೆ ಪಾಟ್ನಾದ ಬುದ್ಧ ಕಾಲೋನಿಯ ಎಸ್‌ಟಿ ಪೌಲ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


