ಬೆಂಗಳೂರು ನಗರದ 8ನೇ ಮತ್ತು ಕರ್ನಾಟಕದ 12ನೇ ವಂದೇ ಭಾರತ್ ರೈಲು ಸೇವೆಗೆ ನವೆಂಬರ್ 8ರ ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಉದ್ಘಾಟನಾ ರೈಲು ಸಂಚಾರವನ್ನು ನಡೆಸಲಿದ್ದು, ನವೆಂಬರ್ 11 ರಿಂದ ವಾಣಿಜ್ಯ ಸಂಚಾರ ಪ್ರಾರಂಭವಾಗಲಿದೆ.
ಶನಿವಾರ ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಒಟ್ಟು 4 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಅವರು ಚಾಲನೆ ನೀಡಲಿದ್ದಾರೆ. ಇದರಲ್ಲಿ ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಸಹ ಸೇರಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಕೇರಳವನ್ನು ಸಂಪರ್ಕಿಸುವ ಬಹು ಬೇಡಿಕೆಯ ರೈಲು ಸೇವೆ ಇದಾಗಿದೆ. ಕೇರಳ ರಾಜ್ಯದ ಬಿಜೆಪಿ ನಾಯಕರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮುಂದೆ ಎರ್ನಾಕುಲಂ-ಬೆಂಗಳೂರು ರೈಲು ಸೇವೆಗಾಗಿ ಬೇಡಿಕೆ ಇಟ್ಟಿದ್ದರು.
ರೈಲು ವೇಳಾಪಟ್ಟಿ, ನಿಲ್ದಾಣಗಳು: ಎರ್ನಾಕುಲಂ ಜಂಕ್ಷನ್-ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್) ನಡುವೆ 8 ಬೋಗಿಯ ವಂದೇ ಭಾರತ್ ರೈಲು ಸಂಚಾರವನ್ನು ನಡೆಸಲಿದೆ. ಉದ್ಘಾಟನಾ ವಿಶೇಷ ರೈಲು ಸಂಖ್ಯೆ 06652 ಎರ್ನಾಕುಲಂನಿಂದ ಬೆಳಗ್ಗೆ 8 ಗಂಟೆಗೆ ಹೊರಡಲಿದ್ದು, ಸಂಜೆ 5.50ಕ್ಕೆ ಬೆಂಗಳೂರು ನಗರ ತಲುಪಲಿದೆ.
ನೆವೆಂಬರ್ 11ರಿಂದ ರೈಲು ನಂಬರ್ 26651/ 26652 ರೈಲುಗಳು ಎರ್ನಾಕುಲಂ ಜಂಕ್ಷನ್-ಕೆಎಸ್ಆರ್ ಬೆಂಗಳೂರು ನಡುವೆ ಸಂಚಾರವನ್ನು ನಡೆಸಲಿವೆ. 8 ಗಂಟೆ 40 ನಿಮಿಷದಲ್ಲಿ ಈ ರೈಲು ಸಂಚಾರವನ್ನು ನಡೆಸಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಈ ನೂತನ ವಂದೇ ಭಾರತ್ ರೈಲು ಎರಡು ಗಂಟೆಗಳಿಗಿಂತ ಹೆಚ್ಚು ಪ್ರಯಾಣ ಸಮಯವನ್ನು ಕಡಿಮೆ ಮಾಡಲಿದೆ. ರೈಲು ಪ್ರಮುಖ ಐಟಿ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವುದರಿಂದ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ವೇಗವಾದ ಹಾಗೂ ಆರಾಮದಾಯಕ ಪ್ರಯಾಣದ ಆಯ್ಕೆಯನ್ನು ನೀಡಲಿದ್ದು, ಉತ್ತಮ ಪ್ರತಿಕ್ರಿಯೆ ನಿರೀಕ್ಷೆ ಮಾಡಲಾಗಿದೆ.
ರೈಲು ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಆರ್ಥಿಕ ಚಟುವಟಿಕೆ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ. ಬುಧವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ಈ ರೈಲು ಸಂಚಾರವನ್ನು ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎರ್ನಾಕುಲಂ ಜಂಕ್ಷನ್-ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ರೈಲು ಕೆ.ಆರ್.ಪುರ, ಸೇಲಂ, ಈರೋಡ್, ತಿರಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶೂರ್ ನಿಲ್ದಾಣದಲ್ಲಿ ನಿಲುಗಡೆಯನ್ನು ಹೊಂದಿದೆ.
ರೈಲು ನಂಬರ್ 26651 ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲು ಸದ್ಯದ ವೇಳಾಪಟ್ಟಿ ಪ್ರಕಾರ ಬೆಂಗಳೂರು (ಮೆಜೆಸ್ಟಿಕ್) ಬೆಳಗ್ಗೆ 5.10ಕ್ಕೆ ಹೊರಡಲಿದ್ದು, ಎರ್ನಾಕುಲಂಗೆ ಮಧ್ಯಾಹ್ನ 1.50ಕ್ಕೆ ತಲುಪಲಿದೆ. ರೈಲು ನಂಬರ್ 26652 ಎರ್ನಾಕುಲಂನಿಂದ ಮಧ್ಯಾಹ್ನ 2.20ಕ್ಕೆ ಹೊರಡಲಿದ್ದು, ರಾತ್ರಿ 11 ಗಂಟೆಗೆ ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ದಕ್ಷಿಣ ರೈಲ್ವೆ ಅಧಿಕಾರಿಗಳ ಪ್ರಕಾರ ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ರೈಲು ಕೇರಳ ರಾಜ್ಯದ 3ನೇ ವಂದೇ ಭಾರತ್ ರೈಲು ಸೇವೆಯಾಗಿದೆ. ಕೇರಳವನ್ನು ತಮಿಳುನಾಡು ಮತ್ತು ಕರ್ನಾಟಕದೊಂದಿಗೆ ಸಂಪರ್ಕಿಸುವ ಮೊದಲ ಅಂತರರಾಜ್ಯ ವಂದೇ ಭಾರತ್ ರೈಲು ಇದಾಗಿದೆ.
ಕರ್ನಾಟಕದಲ್ಲಿ ಸದ್ಯ 11 ವಂದೇ ಭಾರತ್ ರೈಲುಗಳಿವೆ. ಬೆಂಗಳೂರು ನಗರದಲ್ಲಿ 7 ರೈಲುಗಳಿದ್ದು, ಎರ್ನಾಕುಲಂ ಜಂಕ್ಷನ್ ರೈಲು 8ನೇಯದ್ದಾಗಿದೆ. ಕೇರಳದಿಂದ ಈಗಾಗಲೇ ಕರ್ನಾಟಕದ ಕರಾವಳಿ ಮಂಗಳೂರು ನಗರಕ್ಕೆ ವಂದೇ ಭಾರತ್ ರೈಲು ಸಂಪರ್ಕವಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


