ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಇತ್ತೀಚೆಗಷ್ಟೆ ಭೈರತಿ ರಣಗಲ್ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ. ಚಿತ್ರ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದು, ಇದು ಶಿವಣ್ಣನ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಆದರೆ ಈ ಚಿತ್ರದ ಯಶಸ್ಸಿನ ಸುದ್ದಿಗಿಂತ ಶಿವಣ್ಣ ತಮ್ಮ ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದ ಹೇಳಿಕೆಯೇ ಅಭಿಮಾನಿಗಳ ಮೇಲೆ ಹೆಚ್ಚು ಪ್ರಭಾವ ಬೀರಿದೆ.
ಹೌದು, ಭೈರತಿ ರಣಗಲ್ ಬಿಡುಗಡೆಗೂ ಮುನ್ನ ಶಿವಣ್ಣ ಭಾಗವಹಿಸಿದ್ದ ಹಲವಾರು ಸಂದರ್ಶನಗಳಲ್ಲಿ ತಮಗಿರುವ ಅನಾರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಸದ್ಯ ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ತಾವು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗಬೇಕು ಎಂದೂ ಸಹ ತಿಳಿಸಿದ್ದರು.
ಸದಾ ಕೈನಲ್ಲಿ ಹಲವಾರು ಚಿತ್ರಗಳನ್ನು ಹೊಂದಿರುವ ಶಿವಣ್ಣ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಬಳಿಕ ಒಂದು ತಿಂಗಳ ವಿಶ್ರಾಂತಿ ಪಡೆದ ನಂತರ ಮತ್ತೆ ಚಿತ್ರೀಕರಣದ ಕೆಲಸಗಳಿಗೆ ಮರಳಿದ್ದಾರೆ. ಇನ್ನು ಅಮೆರಿಕಾಗೆ ಹಾರುವ ಮುನ್ನ ಶಿವರಾಜ್ಕುಮಾರ್ ತಮ್ಮ ಪತ್ನಿ, ಮಗಳು ಹಾಗೂ ಚಿತ್ರರಂಗದ ಕೆಲ ಆಪ್ತರ ಜತೆ ಆಂಧ್ರಪ್ರದೇಶದ ತಿರುಮಲ ದೇವಾಲಯಕ್ಕೆ ಭೇಟಿ ನೀಡಿ ಮುಡಿ ಕೊಟ್ಟಿದ್ದಾರೆ.
ಈ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಹಾಗೂ ಸಿನಿ ರಸಿಕರು ಆದಷ್ಟು ಬೇಗ ಗುಣಮುಖರಾಗಿ ಬನ್ನಿ, ತಿಮ್ಮಪ್ಪನ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಕಾಮೆಂಟ್ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


