ಕನ್ನಡ ಚಿತ್ರರಂಗದಲ್ಲಿ ಬಹು ದಿನಗಳ ಬಳಿಕ ಸ್ಟಾರ್ ನಟರ ಚಿತ್ರಗಳು ಬೆಳ್ಳಿ ತೆರೆಗೆ ಅಪ್ಪಳಿಸುತ್ತಿವೆ. ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ನಟರ ಚಿತ್ರಗಳಾವುವೂ ಈ ವರ್ಷ ಬಿಡುಗಡೆಯಾಗದೇ ಇದ್ದು, ವರ್ಷದ ಕೊನೆಯ ತಿಂಗಳಲ್ಲಿ ಮೂರು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ಈ ಪೈಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ಸಹ ಒಂದು. 2023ರ ಡಿಸೆಂಬರ್ ತಿಂಗಳಿನಲ್ಲಿ ಕಾಟೇರ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ದರ್ಶನ್ ಎರಡು ವರ್ಷಗಳ ಬಳಿಕ ಮತ್ತೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಹಾಡುಗಳು ಹಾಗೂ ಇತ್ತೀಚೆಗಷ್ಟೆ ಟ್ರೈಲರ್ ಸಹ ಬಿಡುಗಡೆಯಾಗಿ ಚಿತ್ರಕ್ಕೆ ಬೇಕಾದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಇನ್ನೇನಿದ್ದರೂ ಪ್ರೇಕ್ಷಕ ಮಹಾಪ್ರಭು ಚಿತ್ರ ಹೇಗಿದೆ ಎಂಬುದನ್ನು ನಿರ್ಧರಿಸುವುದಷ್ಟೇ ಬಾಕಿಯಿದೆ.
ಅಂದಹಾಗೆ ಚಿತ್ರ ಇದೇ ತಿಂಗಳ 11ರಂದು ಬಿಡುಗಡೆಯಾಗುತ್ತಿದ್ದು, ನಿನ್ನೆ ( ಡಿಸೆಂಬರ್ 6 ) ಮುಂಗಡ ಬುಕಿಂಗ್ ತೆರೆಯಲಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಗುರುವಾರದ ಬೆಳಗಿನ ಪ್ರದರ್ಶನಗಳಿಗೆ ಅಡ್ವಾನ್ಸ್ ಬುಕಿಂಗ್ ನಡೆದಿದ್ದು, ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಂದಾಗಿದ್ದಾರೆ.
ಹೀಗೆ ಡೆವಿಲ್ ಬಿಡುಗಡೆ ದಿನದ ಬೆಳಗಿನ ಜಾವದ ಪ್ರದರ್ಶನಗಳಿಗೆ ನಡೆದ ಮುಂಗಡ ಬುಕಿಂಗ್‌ನ ಮೂಲಕ ಗಳಿಕೆಯಾದ ಹಣದ ಮಾಹಿತಿಯನ್ನು ಚಿತ್ರ ನಿರ್ಮಾಣ ಸಂಸ್ಥೆ ಜೈಮಾತಾ ಕಂಬೈನ್ಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಚಿತ್ರತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು ಫಸ್ಟ್ ಡೇ ಫಸ್ಟ್ ಶೋ 2 ಕೋಟಿ 52 ಲಕ್ಷ ರೂ ಕಲೆಕ್ಷನ್ ಮಾಡಿದೆ ಎಂದು ತಿಳಿಸಿದೆ. ಇನ್ನೂ ಮೊದಲ ದಿನದ ಸಂಪೂರ್ಣ ಬುಕಿಂಗ್ ತೆರೆಯಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


