2011ರಲ್ಲಿ ತೆರೆಕಂಡು ಸೂಪರ್‌ಹಿಟ್ ಆಗಿದ್ದ ಸಂಜು ವೆಡ್ಸ್ ಗೀತಾ ಚಿತ್ರದ ಹೆಸರನ್ನೇ ಮತ್ತೊಮ್ಮೆ ಬಳಸಿ ಸಿನಿ ರಸಿಕರ ಮುಂದೆ ಬರಲು ಸಜ್ಜಾಗಿದ್ದಾರೆ ನಿರ್ದೇಶಕ ನಾಗಶೇಖರ್. ಹೌದು, ಸಂಜು ವೆಡ್ಸ್ ಗೀತಾ 2 ಸಿನಿಮಾ ಇದೇ ಶುಕ್ರವಾರ ( ಜನವರಿ 10 ) ಬಿಡುಗಡೆಯಾಗಲಿದ್ದು, ನಾಯಕನಾಗಿ ಶ್ರೀನಗರ ಕಿಟ್ಟಿಯೇ ನಟಿಸಿದ್ದು, ನಾಯಕಿಯಾಗಿ ಈ ಬಾರಿ ರಮ್ಯಾ ಬದಲು ರಚಿತಾ ರಾಮ್ ಬಣ್ಣ ಹಚ್ಚಿದ್ದಾರೆ.
ಇನ್ನು ಚಿತ್ರದ ಬಿಡುಗಡೆ ದಿನ ಸಮೀಪಿಸುತ್ತಿದ್ದು, ಚಿತ್ರತಂಡ ಪ್ರಚಾರದ ಸಲುವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನಾಗಶೇಖರ್ ಹಾಡೊಂಡನ್ನು ಹಾಡಿಸಲು ಶ್ರೇಯಾ ಘೋಷಾಲ್ ಅವರನ್ನು ಸಂಪರ್ಕಿಸಿದ್ದು, ಅವರು ಕನ್ನಡ ಹಾಡುಗಳನ್ನು ಹಾಡುವುದನ್ನು ನಿಲ್ಲಿಸಿದ್ದಾರೆ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
“ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ನಮ್ಮ ಚಿತ್ರಕ್ಕೆ ಹಾಡಬೇಕು ಎಂದು ಪ್ಲಾನ್ ಮಾಡಿದ್ವಿ. ಸಂಗೀತ ಸಂಯೋಜನೆ ಮಾಡುವ ಸಮಯದಲ್ಲಿ ಶ್ರೇಯಾ ಘೋಷಾಲ್ ಅಂತ ಇತ್ತು. ಏಕೆಂದರೆ ನಾನು ಮಾಡಿರುವ ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ. ಸಂಜು ಮತ್ತು ಗೀತಾ ಚಿತ್ರದಲ್ಲಿ ಗಗನವೇ ಬಾಗಿ ಹಾಗೂ ಸಂಜು ಮತ್ತು ಗೀತಾ ಚಿತ್ರದ ಹಾಡನ್ನು ಹಾಡಿದ್ದರು. ಅದೇ ಥರಹದ ಒಂದು ಹಾಡನ್ನು ಮತ್ತೆ ಕ್ರಿಯೇಟ್ ಮಾಡಬೇಕು ಅಂದುಕೊಂಡು ಸಂಪರ್ಕ ಮಾಡಿದಾಗ ಶ್ರೇಯಾ ಅವರು ಹಾಡಲ್ಲ ಅಂತ ಹೇಳ್ತಾರೆ. ಏಕೆಂದರೆ ಬಹುತೇಕ ಕನ್ನಡದ ಹಾಡುಗಳನ್ನು ಹಾಡುವುದನ್ನು ನಿಲ್ಲಿಸಿದ್ದಾರೆ. ಕಾರಣ ಏನು ಅಂತ ಸರಿಯಾಗಿ ಗೊತ್ತಿಲ್ಲ ಅದು ನಮಗೆ ಬೇಡ ಅಂತ ಸುಮ್ಮನಿದ್ದೀನಿ” ಎಂದು ನಾಗಶೇಖರ್ ಹೇಳಿದರು.
ಆದರೆ ಅತ್ತ ಶ್ರೇಯಾ ಘೋಷಾಲ್ ಕೊರಗಜ್ಜ ಚಿತ್ರದ ಹಾಡಿಗೆ ದನಿ ನೀಡಿದ್ದಾರೆ. ಹೌದು, ಶಂಕರ್ ಮಹಾದೇವನ್ ಹಾಗೂ ಶ್ರೇಯಾ ಘೋಷಾಲ್ ಈ ಚಿತ್ರಕ್ಕೆ ಹಾಡು ಹಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


