ಬೆಂಗಳೂರು: ಮದ್ದೂರಿನ ಗಲಭೆಯಲ್ಲಿ ಪೊಲೀಸರು ಕಾನೂನು ರೀತ್ಯ ನಡೆದುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ವರದಿಯ ಬಳಿಕ ಯಾರೇ ತಪ್ಪು ಮಾಡಿದ್ದರು ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮದ್ದೂರಿನಲ್ಲಿ ಗಣೇಶೋತ್ಸವದಲ್ಲಿ ಮಸೀದಿಯ ಮುಂದೆ ಮೆರವಣಿಗೆ ಹೋಗುವಾಗ ಗಲಾಟೆಯಾಗಿದೆ. ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಮೆರವಣಿಗೆಯನ್ನು ಮಸೀದಿಯ ಮುಂದೆ ನಿಲ್ಲಿಸಬೇಡಿ, ಮುಂದೆ ಹೋಗಿ ಎಂದು ಪೊಲೀಸರು ಹೇಳಿದ್ದರೂ, ಕೇಳಿಲ್ಲ. ಗುಂಪುಕಟ್ಟಿಕೊಂಡು ಗಲಾಟೆ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಲಾಗಿದೆ ಎಂದರು.
ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು, ಅದು ಹಿಂದುಗಳೇ ಇರಲಿ, ಮುಸ್ಲಿಂರೇ ಇರಲಿ. ಈಗಾಗಲೇ 21 ಮಂದಿಯನ್ನು ಬಂಧಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈಗ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಅವರು ನೀಡುವ ವರದಿ ಆಧಾರಿಸಿ, ಮುಂದೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈವರೆಗೂ ಪೊಲೀಸರು ಯಾವುದೇ ತಪ್ಪು ಮಾಡಿಲ್ಲ. ಕಾನೂನು ರೀತಿಯಲ್ಲಿ ನಡೆದುಕೊಂಡಿದ್ದಾರೆ. ಹಾಗೂ ಒಂದು ವೇಳೆ ತಪ್ಪುಗಳಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ.
ರಾಜ್ಯದಲ್ಲಿ ಗಣೇಶೋತ್ಸವದಲ್ಲಿ ಎಲ್ಲೆಯೂ ಗಲಾಟೆ ಆಗಿರಲಿಲ್ಲ. ಮದ್ದೂರಿನಲ್ಲಿ ನಡೆದಿದೆ. ಬಿಜೆಪಿಯವರು ಜನರ ನೆಮ್ಮದಿ ಕೆಡಿಸುತ್ತಿದ್ದಾರೆ. ಕೋಮುವಾದದ ಆಧಾರದ ಮೇಲೆ ಪಕ್ಷ ಸಂಘಟನೆ ಮಾಡಲು ಯತ್ನಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಬಿಜೆಪಿಯವರು ಪ್ರಚೋದನೆ ಮಾಡುವುದರಲ್ಲಿ, ಜನರ ನೆಮದಿ ಹಾಳು ಮಾಡುವುದರಲ್ಲಿ ನಿಸ್ಸಿಮರು. ಅನಗತ್ಯವಾಗಿ ಗುಂಪು ಸೇರಿ ಗಲಾಟೆ ಮಾಡಿಸುತ್ತಾರೆ. ಮದ್ದೂರಿನ ಘಟನೆಯ ಹಿಂದೆ ಯಾರೇ ಇದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಘಟನೆಯ ಬಗ್ಗೆ ಹೆಚ್ಚಿನ ವರದಿ ಬರಲಿ ನಂತರ ಪ್ರತಿಕ್ರಿಯೆ ಮಾಡುತ್ತೇವೆ ಎಂದರು.
ಭಾನು ಮುಷ್ತಾಕ್‌ರಿಂದ ದಸರಾ ಉದ್ಘಾಟಿಸುವುದನ್ನು ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವುದು ರಾಜಕೀಯ ಪ್ರೇರಿತವಾಗಿದೆ. ಅವರ ಪಕ್ಷದಲ್ಲಿ ಅವರನ್ನು ಸಂಪೂರ್ಣ ಕಡೆಗಣಿಸಲಾಗಿದೆ, ಅಸ್ತಿತ್ವ ಉಳಿವಿಗಾ ಹಾಗೂ ಪ್ರಚಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯ ತೀರ್ಮಾನ ಮಾಡಲಿ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿಯೂ ಆಗಿರುವ ಕೃಷಿ ಸಚಿವ ಚಲುವರಾಯ ಸ್ವಾಮಿ, ಬಿಜೆಪಿಯವರಿಗೆ ತಮ ಪಕ್ಷ ಸಂಘಟಿಸಲು ಇಂತಹ ಗಲಭೆಗಳು ಬೇಕಿವೆ. ಸರ್ಕಾರದ ವಿರುದ್ಧ ಆರೋಪ ಮಾಡಲು ಅವರಿಗೆ ಬೇರೆ ವಿಷಯಗಳಿಲ್ಲ. ಅದಕ್ಕಾಗಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮದ್ದೂರಿನ ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ 21 ಮಂದಿಯನ್ನು ಬಂಧಿಸಲಾಗಿದೆ. ಬಿಜೆಪಿಯವರು ಪ್ರತಿಭಟನೆ ಮಾಡಲು, ಮನವಿ ನೀಡಲು ನಮ ಅಭ್ಯಂತರ ಇಲ್ಲ. ಆದರೆ ಬಿಜೆಪಿ ನಾಯಕರು ಅನಗತ್ಯವಾಗಿ ಪ್ರತಿಭಟನೆಗೆ ಕರೆ ನೀಡಿ ಪ್ರಚೋದನೆ ನೀಡುತ್ತಿರುವುದು ಸರಿಯಲ್ಲ.
ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡಿದ ವಿನಯ್ ಗುರೂಜಿ ನಿಂತಿದ್ದು ಯಾರ ಪರ?
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


