ನಾಟಿ ಕೋಳಿ… ಕರ್ನಾಟಕದ ರಾಜಕೀಯದಲ್ಲಿ ಈಗ ಭಾರೀ ಚರ್ಚೆಯ ವಿಚಾರ. ಬೆಂಗಳೂರಿನಲ್ಲಿ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್ ನಾಟಿ ಕೋಳಿ ಸಾರಿನ ಘಮ ಈಗ ಬೆಳಗಾವಿಗೂ ತಲುಪಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿದೆ. ಇಲ್ಲೂ ನಾಟಿ ಕೋಳಿ ಕುರಿತು ಚರ್ಚೆಯಾಗಿದೆ.
ಡಿಸೆಂಬರ್ 8ರ ಸೋಮವಾರದಿಂದ 19ರ ತನಕ ಚಳಿಗಾಲದ ಅಧಿವೇಶನ ನಡೆಯಲಿದೆ. ಮೊದಲ ದಿನದ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪವನ್ನು ಸೂಚಿಸಿ ಕಲಾಪವನ್ನು ಮಂಗಳವಾರ ಬೆಳಗ್ಗೆ 10ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.
ಸೋಮವಾರ ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಮುಖಾಮುಖಿಯಾದರು. ಈ ವೇಳೆ ನಾಟಿ ಕೋಳಿ ಸಾರಿನ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು.
ಅಶೋಕ್ ಸಣ್ಣ ಆಗಿದ್ದು ಹೇಗೆ?; ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಆರ್.ಅಶೋಕ ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಣ್ಣಗಾಗಿದ್ದೀಯಾ?, ಹೇಗೆ? ಎಂದು ಉಭಯ ಕುಶಲೋಪರಿ ವಿಚಾರಿಸಿದರು.
ಆಗ ಆರ್.ಅಶೋಕ ನಾಟಿ ಕೋಳಿ ತಿನ್ನೋದು ಬಿಟ್ಟಿದ್ದೀನಿ ಎಂದು ಸಿದ್ದರಾಮಯ್ಯಗೆ ಉತ್ತರ ನೀಡಿದರು. ಅದಕ್ಕೆ ಸಿದ್ದರಾಮಯ್ಯ ಹಾಗೆಲ್ಲ ತಿನ್ನೋದು ಬಿಡಬಾರದು ಚೆನ್ನಾಗಿ ತಿನ್ನಬೇಕು ನೀನು ಎಂದರು. ಬಾ ಫೋಟೋ ತೆಗೆಸಿಕೊಳ್ಳೋಣ ಎಂದು ಸಿದ್ದರಾಮಯ್ಯ, ಅಶೋಕ ಒಟ್ಟಾಗಿ ಫೋಟೋ ತೆಗೆಸಿಕೊಂಡರು.
ಈ ಚರ್ಚೆಯ ಬಳಿಕ ಸಿದ್ದರಾಮಯ್ಯ ಸ್ಪೀಕರ್ ಯು.ಟಿ.ಖಾದರ್ ಕಚೇರಿಗೆ ತೆರಳಿದರು. ಆರ್.ಅಶೋಕ ಜೊತೆಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಇದ್ದರು.
ಅಶೋಕ ನಾಟಿ ಕೋಳಿ ವಿಚಾರ ಪ್ರಸ್ತಾಪಿಸಿದ್ದಕ್ಕೆ ಕಾರಣವಾಗಿದೆ. ಡಿಸೆಂಬರ್ 3ರಂದು ಸಿದ್ದರಾಮಯ್ಯ ಸದಾಶಿವನಗರದ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಉಪಹಾರಕೂಟಕ್ಕೆ ಹೋಗಿದ್ದರು. ಉಪಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಆದ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ತೆರಳಿ, ಬೆಳಗಿನ ಉಪಹಾರ ಸೇವಿಸುತ್ತಾ ಮಾತುಕತೆ ನಡೆಸಿದೆ ಎಂದು ಪೋಸ್ಟ್ ಹಾಕಿದ್ದರು.
ಅಂದು ಉಪಹಾರಕ್ಕೆ ನಾಟಿ ಕೋಳಿ ಸಾರು, ಬಿಸಿ ಬಿಸಿ ಇಡ್ಲಿ ಮಾಡಿಸಲಾಗಿತ್ತು. ಡಿ.ಕೆ.ಶಿವಕುಮಾರ್ ಮಾಂಸಾಹಾರ ಸೇವಿಸುವುದಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಅವರಿಗಾಗಿ ನಾಟಿ ಕೋಳಿಯ ಸಾರು ಮಾಡಿಸಿದ್ದರು.
ಉಪಹಾರಕೂಟದ ಬಳಿಕ ಮಾತನಾಡಿದ್ದ ಸಿದ್ದರಾಮಯ್ಯ ನಾಟಿ ಕೋಳಿ ತರಿಸುವಂತೆ ನಾನೇ ಹೇಳಿದ್ದೆ. ಇಲ್ಲಿಯ ಕೋಳಿ ಬೇಡ, ಹಳ್ಳಿಯಿಂದ ತರಿಸುವಂತೆ ಹೇಳಿದ್ದೆ. ಅವನು ಮಾಂಸಾಹಾರ ತಿನ್ನುವುದಿಲ್ಲ. ನನಗಾಗಿ ಕೋಳಿ ಸಾರು ಮಾಡಿಸಿದ್ದ ಎಂದು ಹೇಳಿದ್ದರು.
ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ನಡೆದ ರಾಜ್ಯ ರಾಜಕೀಯದ ಹೈ ವೋಲ್ಟೇಜ್ ಬ್ರೇಕ್ ಫಾಸ್ಟ್ ಮೀಟಿಂಗ್ ಉಲ್ಲೇಖ ಮಾಡಿಯೇ ಆರ್.ಅಶೋಕ ನಾಟಿ ಕೋಳಿ ತಿನ್ನೋದು ಬಿಟ್ಟು ಸಣ್ಣಗಾಗಿದ್ದೇನೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಸಹ ಇದಕ್ಕೆ ನಕ್ಕರು.
ಈ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಮಾತನಾಡಿದ್ದ ಆರ್.ಅಶೋಕ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ನಾಟಿ ಕೋಳಿ ಮರ್ಡರ್ ಆಗಿದೆ ಎಂದು ಹೇಳಿದ್ದರು. ಈ ಹೇಳಿಕೆ ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು.
ಹೈಕಮಾಂಡ್ ನಾಯಕರ ಸೂಚನೆಯಂತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎರಡು ಬಾರಿ ಉಪಹಾರಕೂಟ ಮಾಡಿದ್ದರು. ಮೊದಲು ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಬಂದಿದ್ದರು. ಆಗ ದೋಸೆ, ಉಪ್ಪಿಟ್ಟು, ಕೇಸರಿಬಾತ್, ಕಾಫಿ ವ್ಯವಸ್ಥೆ ಮಾಡಲಾಗಿತ್ತು.
ಕಾವೇರಿ ನಿವಾಸದ ಉಪಹಾರಕೂಟದ ಬಳಿಕ ಮಾತನಾಡಿದ್ದ ಸಿದ್ದರಾಮಯ್ಯ, “ಪಕ್ಷದ ವರಿಷ್ಠರ ಸೂಚನೆಯಂತೆ ಡಿ.ಕೆ.ಶಿವಕುಮಾರ್ ಮತ್ತು ನಾನು ನಮ್ಮ ಮನೆಯಲ್ಲಿ ಒಟ್ಟಿಗೆ ಉಪಹಾರ ಸೇವಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಅನಗತ್ಯವಾಗಿ ಕೆಲವು ಗೊಂದಲಗಳು ನಿರ್ಮಾಣವಾಗಿವೆ. ನಾವು ಈ ಬಗ್ಗೆ ಮಾತನಾಡಿದ್ದೇವೆ. 2028ರ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳಾದ ಕಾರ್ಪೋರೇಷನ್, ತಾಲ್ಲೂಕು, ಜಿಲ್ಲಾ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳು ಬಹಳ ಮುಖ್ಯವಾಗಿದ್ದು, ಈ ಬಗ್ಗೆ ಚರ್ಚೆ ಮಾಡಿದ್ದೇವೆ” ಎಂದು ಹೇಳಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


