ಲಾಹೋರ್: ನಿನ್ನೆ (ಫೆಬ್ರವರಿ 8) ಇಲ್ಲಿನ ಗದ್ದಾಫಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆದಿದೆ. ಇದೇ ತಿಂಗಳ 19ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಪಾಕ್‌ನಲ್ಲೇ ನಡೆದಿದ್ದು, ಇದಕ್ಕೂ ಮುನ್ನ ಏಕದಿನ ಸರಣಿಯನ್ನು ಇತ್ತಂಡಗಳು ಆಡುತ್ತಿವೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 330 ರನ್ ಬಾರಿಸಿ ಪಾಕ್‌ಗೆ 331 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಪಾಕಿಸ್ತಾನ 47.5 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್ 78 ರನ್‌ಗಳ ಗೆಲುವನ್ನು ದಾಖಲಿಸಿತು.
ಇನ್ನು ಪಾಕ್ ಬ್ಯಾಟಿಂಗ್ ವೇಳೆ 38ನೇ ಓವರ್‌ನಲ್ಲಿ ಖುಷ್‌ದಿಲ್ ಶಾ ಮೈಕೆಲ್ ಬ್ರೇಸ್‌ವೆಲ್ ಎಸೆದ ಎಸೆತಕ್ಕೆ ಹೊಡೆತ ಬಾರಿಸಿದರು. ಅದೇ ಜಾಗದಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರಚಿನ್ ರವೀಂದ್ರ ಕ್ಯಾಚ್ ಹಿಡಿಯುವ ಪ್ರಯತ್ನ ಮಾಡಿದರು. ಆದರೆ ಕಣ್ಣಿಗೆ ಫ್ಲಡ್‌ಲೈಟ್ ಕಿರಣಗಳು ಬಡಿದ ಕಾರಣ ರಚಿನ್ ರವೀಂದ್ರ ಅವರಿಗೆ ಚಂಡನ್ನು ಗುರುತಿಸಲು ಸಾಧ್ಯವಾಗದೇ ಚಂಡು ನೇರವಾಗಿ ರಚಿನ್ ರವೀಂದ್ರ ಮುಖಕ್ಕೆ ಬಡಿದಿದೆ. ಪರಿಣಾಮ ರಚಿನ್ ರವೀಂದ್ರ ಅಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ವೈದ್ಯರು ರಚಿನ್ ರವೀಂದ್ರ ಮುಖಕ್ಕೆ ಟವೆಲ್ ಹಾಕಿ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ದರು.
ಸದ್ಯ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸ್ಟೇಡಿಯಂ ಗುಣಮಟ್ಟದ ಕುರಿತು ಚರ್ಚೆಗಳು ಏರ್ಪಟ್ಟಿದ್ದು, ಪಾಕ್ ಕ್ರಿಕೆಟ್ ಮಂಡಳಿ ಟ್ರೋಲ್‌ಗೊಳಗಾಗಿದೆ. ಚಾಂಪಿಯನ್ಸ್ ಟ್ರೋಫಿಗೆ ಪಾಕ್ ಎಷ್ಟರ ಮಟ್ಟಕ್ಕೆ ಸ್ಟೇಡಿಯಂಗಳನ್ನು ಸಿದ್ಧಪಡಿಸಿದೆ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


