ಪ್ರಸ್ತುತ ಭಾರತ ಹಾಗೂ ನೆರೆ ರಾಷ್ಟ್ರ ಪಾಕ್ ನಡುವೆ ಯುದ್ಧದ ಮುನ್ಸೂಚನೆಗಳು ಹೆಚ್ಚಿವೆ. ಪಾಕ್ ಉಗ್ರರು ಏಪ್ರಿಲ್ 22ರಂದು ನಡೆಸಿದ ಪೆಹಲ್ಗಾಮ್ ದಾಳಿಯ ಬಳಿಕ ಭಾರತ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಉಗ್ರರ ಬೇಟೆಯಾಡಿದ್ದು, ಪ್ರತಿಕಾರ ತೀರಿಸಿಕೊಂಡಿದೆ.
ಹೀಗಿರುವಾಗ ಪಾಕಿಸ್ತಾನ ನಿನ್ನೆ ( ಮೇ 8 ) ರಾತ್ರೋರಾತ್ರಿ ಭಾರತದ ಗಡಿ ಸಮೀಪಿಸಿ ದಾಳಿ ನಡೆಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯೂ ದಾಳಿ ನಡೆಸಿದೆ. ಹೀಗೆ ಪಾಕ್ ದಾಳಿ ಪರಿಣಾಮ ನಿನ್ನೆ ಪಂಜಾಬ್ ಹಾಗೂ ರಾಜಸ್ಥಾನದ ಹಲವೆಡೆ ಬ್ಲಾಕ್‌ಔಟ್ ಮಾಡಲಾಯಿತು.
ಅದರಂತೆ ನಿನ್ನೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಸಹ ಸ್ಥಗಿತಗೊಂಡಿದೆ. ಸ್ಟೇಡಿಯಂನ ಫ್ಲಡ್‌ಲೈಟ್‌ಗಳು ಆಫ್ ಆಗಿದ್ದು, ಪಂದ್ಯ ಮೊದಲ ಇನ್ನಿಂಗ್ಸ್‌ನ 10.1 ಓವರ್‌ಗೆ ಸ್ಥಗಿತಗೊಂಡಿದೆ. ಹೀಗೆ ಸ್ಟೇಡಿಯಂ ಲೈಟ್‌ಗಳು ಆಫ್ ಆಗುತ್ತಿದ್ದಂತೆ ಆಟಗಾರರನ್ನು ವಾಪಸ್ ಪೆವಿಲಿಯನ್‌ಗೆ ಕಳುಹಿಸಲಾಗಿದೆ. ಅಲ್ಲದೇ ಪಂದ್ಯ ವೀಕ್ಷಿಸಲು ಬಂದಿದ್ದ ಕ್ರೀಡಾಭಿಮಾನಿಗಳನ್ನು ಕ್ರೀಡಾಂಗಣದಿಂದ ಆಚೆ ಕಳಹಿಸಲಾಗಿದೆ.
ತಂತ್ರಜ್ಞಾನದ ತೊಂದರೆ ಎಂಬ ಕಾರಣವನ್ನು ಬಿಸಿಸಿಐ ನೀಡಿದ್ದು, ಧರ್ಮಶಾಲಾ ಪಾಕ್ ಬಾರ್ಡರ್‌ಗೆ ಸಮೀಪದಲ್ಲೇ ಇರುವ ಕ್ರೀಡಾಂಗಣ ಎಂಬುದು ಅಸಲಿ ಕಾರಣ ಎಂಬುದು ಸತ್ಯಾಂಶ. ಹೀಗೆ ಆಟಗಾರರು ಹಾಗೂ ವೀಕ್ಷಕರ ದೃಷ್ಟಿಯಿಂದ ಈ ಪಂದ್ಯವನ್ನು ರದ್ದುಪಡಿಸಲಾಗಿದ್ದು, ಸದ್ಯ ಸಚಿವ ಸಂತೋಷ್ ಲಾಡ್ ಇಡೀ ಐಪಿಎಲ್ ಅನ್ನೇ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ಆಟಗಾರರ ಹಾಗೂ ಪಂದ್ಯ ವೀಕ್ಷಿಸಲು ಬಂದ ವೀಕ್ಷಕರ ಸುರಕ್ಷತೆಯನ್ನು ತಲೆಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬಿಸಿಸಿಐಗೆ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸುವಂತೆ ತಿಳಿಸಲಿ ಎಂದು ಲಾಡ್ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


